ಭಾರತಕ್ಕೆ ಟಾಂಗ್ ನೀಡಿದ ನೇಪಾಳ; ಚೀನಾದ ಸಾರಿಗೆ ಒಪ್ಪಂದಕ್ಕೆ ಸಹಿ

ನೇಪಾಳ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಭಾರತ ತೋರಿದ ಧೋರಣೆಗೆ ಸಂಬಂಧಿಸಿದಂತೆ ಟಾಂಗ್ ನೀಡಿರುವ ನೇಪಾಳ ಸರ್ಕಾರ ಇದೀಗ ಚೀನಾದೊಂದಿಗೆ ಕೆಲ ಮಹತ್ವದ ಸಾರಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ...
ಚೀನಾ ಪ್ರಧಾನಿ ಲೀ ಕೆಕಿಯಾಂಗ್ ರೊಂದಿಗೆ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ (ಸಂಗ್ರಹ ಚಿತ್ರ)
ಚೀನಾ ಪ್ರಧಾನಿ ಲೀ ಕೆಕಿಯಾಂಗ್ ರೊಂದಿಗೆ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ (ಸಂಗ್ರಹ ಚಿತ್ರ)
Updated on

ಕಠ್ಮಂಡು: ನೇಪಾಳ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಭಾರತ ತೋರಿದ ಧೋರಣೆಗೆ ಸಂಬಂಧಿಸಿದಂತೆ ಟಾಂಗ್ ನೀಡಿರುವ ನೇಪಾಳ ಸರ್ಕಾರ ಇದೀಗ ಚೀನಾದೊಂದಿಗೆ ಕೆಲ ಮಹತ್ವದ ಸಾರಿಗೆ  ಒಪ್ಪಂದಗಳಿಗೆ ಸಹಿ ಹಾಕಿದೆ.

ನೇಪಾಳ ಪ್ರಧಾನಿಯಾದ ಬಳಿಕ ಚೀನಾ ದೇಶದ ಆಹ್ವಾನದ ಮೇರೆಗೆ ಇದೇ ಮೊದಲ ಬಾರಿಗೆ ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು, ಚೀನಾ ಪ್ರಧಾನಿ ಲಿ  ಕಿಕಿಯಾಂಗ್ ಅವರನ್ನು ಭಾನುವಾರ ಭೇಟಿ ಮಾಡಿದ್ದರು. ಈ ವೇಳೆ 10ಕ್ಕೂ ಹೆಚ್ಚು ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಲಾಗಿದ್ದು, ಇದರಲ್ಲಿ ಚೀನಾ ಮತ್ತು ನೇಪಾಳಕ್ಕೆ  ಸಂಪರ್ಕ ಕಲ್ಪಿಸುವ ಸಾರಿಗೆ ಒಪ್ಪಂದ ಕೂಡ ಸೇರಿದೆ ಎಂದು ತಿಳಿದುಬಂದಿದೆ.

ವಾಣಿಜ್ಯ ವಹಿವಾಟಿಗಾಗಿ ಭಾರತದ ಬಂದರುಗಳನ್ನು ಅವಲಂಭಿಸಿದ್ದ ನೇಪಾಳ ಇದೀಗ ಅದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡಿದೆ. ಚೀನಾದೊಂದಿಗೆ ಕೈ ಜೋಡಿಸುವ ಮೂಲಕ  ಭಾರತಕ್ಕೆ ಪರೋಕ್ಷವಾಗಿ ನೇಪಾಳ ಟಾಂಗ್ ನೀಡಿದೆ. ಈ ಹಿಂದೆಲ್ಲ ನೇಪಾಳ ದೇಶ, ಭಾರತದ ಪಶ್ಚಿಮ ಬಂಗಾಳದಲ್ಲಿರುವ ಕೋಲ್ಕತಾದ ಹಲ್ದಿಯಾ ಬಂದರಿನ ಮೂಲಕ ವಾಣಿಜ್ಯ  ವಹಿವಾಟುಗಳನ್ನು ನಡೆಸುತ್ತಿತ್ತು. ಹಲ್ದಿಯಾ ಬಂದರು ನೇಪಾಳದಿಂದ ಕೇವಲ 1 ಸಾವಿರ ಕಿ.ಮೀ ದೂರದಲ್ಲಿದ್ದು, ಇದೀಗ 3000 ಕಿ.ಮೀ ದೂರದಲ್ಲಿರುವ ಚೀನಾದ ಟಿಯಾಂಜಿನ್ ಬಂದರಿನೊಂದಿಗೆ  ನೇಪಾಳ ಸಾರಿಗೆ ಸಂಪರ್ಕ ಹೊಂದುವ ಒಪ್ಪಂದಕ್ಕೆ ಸಹಿ ಹಾಕಿದೆ.

ಚೀನಾ ಮತ್ತು ನೇಪಾಳ ಇಂಧನ ಮತ್ತು ನೈಸರ್ಗಿಕ ಅನಿಲ ವಹಿವಾಟು ಕುರಿತ ಒಪ್ಪಂದಗಳಿಗೂ ಸಹಿ ಹಾಕಿದ್ದು, ನೇಪಾಳಕ್ಕೆ ಆರ್ಥಿಕವಾಗಿ ನೆರವಾಗುವ ಕುರಿತು ಚೀನಾ ಸರ್ಕಾರ ನೇಪಾಳಕ್ಕೆ  ಆಶ್ವಾಸನೆ ಕೂಡ ನೀಡಿದೆ ಎಂದು ತಿಳಿದುಬಂದಿದೆ. ಅಂತೆಯೇ ನೇಪಾಳದ 2ನೇ ಅತಿದೊಡ್ಡ ನಗರವಾದ ಫೋಖಾರದಲ್ಲಿ 216 ಮಿಲಿಯನ್ ಡಾಲರ್ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೂ  ಚೀನಾ ಸರ್ಕಾರ ಅಸ್ತು ಎಂದಿದೆ. ಫೋಖಾರ ನಗರ ಕಠ್ಮಂಡುವಿನಿಂದ 200 ಕಿ.ಮೀ ದೂರದಲ್ಲಿದೆ. ಇದಲ್ಲದೆ ನೇಪಾಳದಲ್ಲಿ ಸುಮಾರು 32 ಸಾವಿರ ಮನೆಗಳಿಗೆ ಸೋಲಾರ್ ಪ್ಯಾನೆಲ್ ಗಳನ್ನು  ಅಳವಡಿಸುವ ಒಪ್ಪಂದಕ್ಕೂ ಚೀನಾ ಮತ್ತು ನೇಪಾಳ ಸಹಿ ಹಾಕಿವೆ ಎಂದು ತಿಳಿದುಬಂದಿದೆ.

ನೇಪಾಳ ಸರ್ಕಾರ ನೂತನ ಸಂವಿಧಾನವನ್ನು ಅಂಗೀಕರಿಸಿದ್ದ ಸಂದರ್ಭದಲ್ಲಿ ಆ ದೇಶದಲ್ಲಿ ಸಾಕಷ್ಟು ಹಿಂಸಾಚಾರಗಳು ನಡೆದಿದ್ದವು. ಈ ಸಂದರ್ಭದಲ್ಲಿ ಭಾರತದೊಂದಿಗೆ ಸಾರಿಗೆ  ಸಂಪರ್ಕವನ್ನು ನೇಪಾಳದ ಪ್ರತಿಭಟನಾಕಾರರು ತಡೆದಿದ್ದರು. ಇದರಿಂದಾಗಿ ನೇಪಾಳದಲ್ಲಿ ತೀವ್ರ ಪ್ರಮಾಣದಲ್ಲಿ ಇಂಧನ ಮತ್ತು ಅಗತ್ಯ ಪರಿಕರಗಳ ಬಿಕ್ಕಟ್ಟು ಕಾಡಿತ್ತು. ನೇಪಾಳ ಸರ್ಕಾರ  ದೇಶದ ಈ ಪರಿಸ್ಥಿತಿಗೆ ಭಾರತ ದೇಶವನ್ನು ಹೊಣೆಗಾರನನ್ನಾಗಿ ಮಾಡಿ ಟೀಕಾ ಪ್ರಹಾರವನ್ನೇ ಹರಿಸಿತ್ತು.

ಇದರ ಬೆನ್ನಲ್ಲೇ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಚೀನಾದೊಂದಿಗೆ ಸಾರಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ನೇಪಾಳದ ಈ ನಡೆಗೆ ಭಾರತ ಸರ್ಕಾರ ಯಾವ ರೀತಿಯ ಉತ್ತರ  ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com