ಚೀನಾ ಅಧ್ಯಕ್ಷರ ರಾಜಿನಾಮೆ ಕೇಳಿದ್ದಕ್ಕೇ ಪತ್ರಕರ್ತರ ಬಂಧನ, ವಿಚಾರಣೆ

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ರಾಜಿನಾಮೆ ಕೇಳಿದ ಒಂದೇ ಕಾರಣಕ್ಕಾಗಿ ಅಲ್ಲಿನ 17 ಮಂದಿ ಪತ್ರಕರ್ತರನ್ನು ಬಂಧಿಸಿ ವಿಚಾರಣೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ...
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್  (ಸಂಗ್ರಹ ಚಿತ್ರ)
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ (ಸಂಗ್ರಹ ಚಿತ್ರ)
Updated on

ಬೀಜಿಂಗ್: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್  ಅವರ ರಾಜಿನಾಮೆ ಕೇಳಿದ ಒಂದೇ ಕಾರಣಕ್ಕಾಗಿ ಅಲ್ಲಿನ 17 ಮಂದಿ ಪತ್ರಕರ್ತರನ್ನು ಬಂಧಿಸಿ ವಿಚಾರಣೆ ನಡೆಸಿರುವ ಘಟನೆ ಬೆಳಕಿಗೆ  ಬಂದಿದೆ.

ವೂಜೀ ನ್ಯೂಸ್ (Wujie News) ಎಂಬ ವೆಬ್ ಸೈಟ್ ಮೂಲಕವಾಗಿ ಅಲ್ಲಿನ ಪತ್ರಕರ್ತರೊಬ್ಬರು ಚೀನಾ ಅಧ್ಯಕ್ಷ ರಾಜಿನಾಮೆಗೆ ಆಗ್ರಹಿಸಿ ವೈಬ್ ಸೈಟ್ ನಲ್ಲಿ ಪತ್ರ ಪ್ರಕಟ ಮಾಡಿದ್ದರು.  ಆದರೆ ಈ ಪತ್ರ ವಿವಾದಕ್ಕೆ ಗ್ರಾಸವಾಗುತ್ತಿದ್ದಂತೆಯೇ ವೆಬ್ ಸೈಟಿನಿಂದ ಪತ್ರವನ್ನು ತೆಗೆದುಹಾಕಲಾಗಿತ್ತು. ಆದರೆ ಅಷ್ಟುಹೊತ್ತಿಗಾಗಲೇ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ  ಮೂಲಕ ವ್ಯಾಪಕ ಸುದ್ದಿಗ್ರಾಸವಾಗಿತ್ತು.

ಇದೀಗ ಪತ್ರಕರ್ತರ ವಿರುದ್ಧ ಕೆಂಗಣ್ಣು ಬೀರಿರುವ ಚೀನಾ ಸರ್ಕಾರ ವೂಜೀ ನ್ಯೂಸ್ ಹಿರಿಯ ಸಂಪಾದಕ ಜಿಅ ಜಿಅ ಸೇರಿದಂತೆ ಒಟ್ಟು 17 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.  ಮೂಲಗಳ ಪ್ರಕಾರ ವೂಜೀ ನ್ಯೂಸ್ ನ ಹಿರಿಯ ಸಂಪಾದಕ ಜಿಅ ಜಿಅ ಅವರ ಆರು ಮಂದಿ ಸಹಕೆಲಸಗಾರರು, ಓರ್ವ ಸೀನಿಯರ್ ಮ್ಯಾನೇಜರ್, ಸಹಾಯಕ ಸಂಪಾದಕ, ವೆಬ್ ಸೈಟ್ ನ  ತಾಂತ್ರಿಕ ವಿಭಾಗದ 10 ಮಂದಿ ಸೇರಿದಂತೆ ಒಟ್ಟು 17 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ.

ಚೀನಾದ ಸ್ಥಳೀಯ ಮಾಧ್ಯಮಗಳು ಘಟನೆಯನ್ನು ಖಂಡಿಸಿದ್ದು, ಪತ್ರಿಕಾ ಸ್ವಾತಂತ್ರ್ಯದ ಹರಣ ಎಂದು ಟೀಕಿಸಿದೆ. ಇನ್ನು ಪತ್ರಕರ್ತರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ "ಆತ್ಮೀಯ ಕಾಮ್ರೇಡ್ ಕ್ಸಿ  ಜಿನ್ ಪಿಂಗ್  ಅವರೇ, ನಾವು ನಿಷ್ಠಾವಂತ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದೇವೆ" ಎಂಬ ಒಕ್ಕಣೆಯೊಂದಿಗೆ ಪತ್ರ ಆರಂಭವಾಗಿ, "ಪಕ್ಷದಿಂದ ಮತ್ತು ರಾಜ್ಯ ನಾಯಕತ್ವದಿಂದ ರಾಜಿನಾಮೆ  ನೀಡುವಂತೆ ಆಗ್ರಹಿಸಿ ನಾವು ಈ ಪತ್ರವನ್ನು ಬರೆಯುತ್ತಿದ್ದೇವೆ ಎಂಬ ಅಂಶದೊಂದಿಗೆ ಪತ್ರ ಮುಕ್ತಾಯವಾಗುತ್ತದೆ ಎಂದು ತಿಳಿದುಬಂದಿದೆ.

ಅಧ್ಯಕ್ಷ ಕ್ಸಿ ಜಿನ್ ಪಿಂಗ್  ಅವರು ಎಲ್ಲ ಅಧಿಕಾರಗಳನ್ನು ತಾವೇ ಇಟ್ಟುಕೊಳ್ಳುವ ಮೂಲಕ ನಮ್ಮ ನೆಲದಲ್ಲೇ ನಮಗೆ ಯಾವುದೇ ಅಧಿಕಾರವಿಲ್ಲದಂತೆ ಮಾಡಿದ್ದಾರೆ. ಅವರ ಅದಕ್ಷತೆಯಿಂದಾಗಿ  ಚೀನಾ ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇನ್ನು ಕಳೆದ ತಿಂಗಳ ಸರ್ಕಾರದ ಅಧೀನದಲ್ಲಿರುವ ಪತ್ರಿಕಾ ಕಚೇರಿಗೆ ಆಗಮಿಸಿದ್ದ ಅಧ್ಯಕ್ಷ ಕ್ಸಿ ಜಿನ್ ಪಿಂಗ್  ಅವರು, ಸರ್ಕಾರ ನೀಡುವ ಪ್ರಾಥಮಿಕ ಆದೇಶಗಳನ್ನು ಪರಿಪಾಲಿಸುವುದೇ  ಪತ್ರಕರ್ತರ ಪ್ರಾಥಮಿಕ ಕೆಲಸ ಎಂದು ಹೇಳಿದ್ದರು. ಇದು ಅಲ್ಲಿನ ಪತ್ರಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನು ಪತ್ರಕರ್ತರ ಬಂಧನ ವಿಚಾರ ಇದೀಗ ಚೀನಾದಲ್ಲಿ ವ್ಯಾಪಕ ರಾಜಕೀಯ  ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com