
ಕಠ್ಮಂಡು: ಭಾರತದಲ್ಲಿರುವ ನೇಪಾಳ ರಾಯಭಾರಿಯಲ್ಲಿ ವಾಪಸ್ ಕರೆಸಿಕೊ ಳ್ಳಲಾಗಿದೆ ಎಂಬ ವರದಿಗಳ ಬೆನ್ನಲ್ಲೇ, ನೇಪಾಳದಲ್ಲಿರುವ ಭಾರತೀಯ ರಾಯಭಾರಿಯನ್ನು ಉಚ್ಚಾಟನೆ ಮಾಡಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ ಎಂಬ ವರದಿಗಳು ಪ್ರಕಟವಾಗಿದೆ. ಆದರೆ ಈ ವರದಿಯನ್ನು ನೇಪಾಳ ಸರ್ಕಾರ ತಿರಸ್ಕರಿಸಿದ್ದು ಇಂತಹ ಯಾವುದೇ ಚಿಂತನೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ರಂಜಿತ್ ರೇ ನೇಪಾಳದಲ್ಲಿರುವ ಭಾರತೀಯ ರಾಯಭಾರಿಯಾಗಿದ್ದು, ನೇಪಾಳದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಬಿಂದ್ಯಾ ಬಂಡಾರಿ ಅವರ ಭಾರತ ಭೇಟಿಯನ್ನು ಮುಂದೂಡಲಾಗಿರುವ ಹಿನ್ನೆಲೆಯಲ್ಲಿ ನೇಪಾಳ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯನ್ನು ಉಚ್ಛಾಟಿಸಲು ತೀರ್ಮಾನಿಸಿತ್ತು ಎಂಬ ವರದಿಗಳು ಪ್ರಕಟವಾಗಿತ್ತು.
ರಂಜಿತ್ ರೇ ವಿರುದ್ಧ ರಾಜತಾಂತ್ರಿಕ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪಗಳು ಕೆಳಿಬಂದಿದ್ದು, ರಂಜಿತ್ ರೇ ಅವರಿಗೆ ನೀಡಲಾಗಿದ್ದ ರಾಜತಾಂತ್ರಿಕ ವಿನಾಯಿತಿಯನ್ನು ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದಕ್ಕೆ ಪೂರಕವೆಂಬಂತೆ ನೇಪಾಳ ಅಧ್ಯಕ್ಷರಾದ ಬಿದ್ಯಾ ಬಂಡಾರಿ ಅವರ ಭಾರತ ಭೇಟಿಯನ್ನು ತಾತ್ಕಾಲಿಕವಾಗಿ ಮುಂಡೂಡಿದ್ದ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ, ಭಾರತದಲ್ಲಿದ್ದ ನೇಪಾಳ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ನೇಪಾಳ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಕಮಲ್ ಥಾಪ, ಭಾರತದ ರಾಯಭಾರಿಯನ್ನು ಉಚ್ಛಾಟಿಸಲು ನೇಪಾಳ ಸರ್ಕಾರ ತೀರ್ಮಾಸಿಸಿದೆ ಎಂಬ ವರದಿಗಳು ಊಹಾಪೋಹವಷ್ಟೇ, ಇಂತಹ ವರದಿಗಳಿಂದ ಭಾರತ- ನೇಪಾಳ ದ್ವಿಪಕ್ಷೀಯ ಸಂಬಂಧಕ್ಕೆ ಅಡ್ಡಿ ಉಂಟಾಗುತ್ತದೆ ಎಂದು ಹೇಳಿದ್ದಾರೆ.
Advertisement