

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ತನ್ನದೇ ಬಾಣ ಇದೀಗ ತಿರುಗುಬಾಣವಾಗಿ ಪರಿಣಮಿಸಿದ್ದು, ಪಾಕಿಸ್ತಾನ ಮಿಲಿಟರಿ ಕ್ಯಾಂಪ್ ಮೇಲೆ ಉಗ್ರರು ನಡೆಸಿದ ದಾಳಿಯಿಂದಾಗಿ ಇಬ್ಬರು ಸೈನಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಸುಮಾರು 6 ಗಂಟೆ ಹೊತ್ತಿನಲ್ಲಿ ವಾಯವ್ಯ ಪಾಕಿಸ್ತಾನದಲ್ಲಿರುವ ಘಲಾನಿ ಮಿಲಿಟರಿ ಕ್ಯಾಂಪ್ ಸಮೀಪದ ಬೃಹತ್ ಮಸೀದಿಗೆ ನುಗ್ಗಲು ಯತ್ನಿಸಿದ ನಾಲ್ಕು ಮಂದಿ ಶಸ್ತ್ರಸಜ್ಜಿತ ಆತ್ಮಹತ್ಯಾ ದಾಳಿಕೋರರು, ಮಸೀದಿಯ ಬಳಿ ಮನಸೋ ಇಚ್ಛೆ ಗುಂಡಿನ ಮಳೆಗರೆದಿದ್ದಾರೆ. ಮಸೀದಿಯಲ್ಲಿದ್ದ ಸೈನಿಕರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಸೈನಿಕರು ಸಾವಿಗೀಡಾಗಿದ್ದಾರೆ. ನಾಲ್ಕೂ ಉಗ್ರಗಾಮಿಗಳು ಆತ್ಮಹತ್ಯಾದಾಳಿಕೋರರಾಗಿದ್ದು, ಸ್ವಯಂ ಸ್ಫೋಟಗೊಳ್ಳುವ ಜಾಕೆಟ್ ಗಳನ್ನು ಧರಿಸಿದ್ದರು ಎಂದು ಹೇಳಲಾಗುತ್ತಿದೆ.
ಇನ್ನು ದಾಳಿಕೋರರ ವಿರುದ್ಘ ಪ್ರತಿದಾಳಿ ನಡೆಸಿದ ಪಾಕಿಸ್ತಾನ ಯೋಧರು ನಾಲ್ಕು ಉಗ್ರರನ್ನು ಗುಂಡಿಕ್ಕಿ ಹತ್ಯೆಗೈದಿದ್ದು, ಅವರು ಧರಿಸಿದ್ದ ಸ್ಫೋಟಕ ಜಾಕೆಟ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಮಸೀದಿ ಆವರಣದಲ್ಲಿ ಇನ್ನೂ ಇಬ್ಬರೂ ಉಗ್ರರು ದಾಳಿ ನಡೆಸುತ್ತಿದ್ದ ಅವರ ವಿರುದ್ಧ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಇನ್ನು ದಾಳಿಯ ಹೊಣೆಯನ್ನು ಪಾಕಿಸ್ತಾನದ ಕುಖ್ಯಾತ ಉಗ್ರಗಾಮಿ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಜಮಾತ್ ಉರ್-ಅಹ್ರಾರ್ ಹೊತ್ತಿದ್ದು, ಸೆರೆಮನೆಯಲ್ಲಿರುವ ತನ್ನ ಉಗ್ರರನ್ನು ಬಂಧಮುಕ್ತಗೊಳಿಸಲು ಈ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ.