
ಟೆಹರಾನ್: ಡ್ರೋಣ್ ತಯಾರಿಕೆಯಲ್ಲಿ ಖ್ಯಾತಿ ಪಡೆದಿರುವ ಇರಾನ್ ಸೇನೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ತನ್ನ ಕ್ರಾಂತಿಕಾರಕ ಆತ್ಮಹತ್ಯಾ ಡ್ರೋಣ್ ಅನ್ನು ವಿಶ್ವಕ್ಕೆ ಪರಿಚಯಿಸಿದೆ.
ಇರಾನ್ ನ ರೆವಲ್ಯೂಷನರಿ ಗಾರ್ಡ್ಸ್, ತಾನು ಅತ್ಯಾಧುನಿಕ ಹಾಗೂ ವಿಶಿಷ್ಟ ಬಗೆಯ ಆತ್ಮಹತ್ಯಾ ಡ್ರೋಣ್ ವಿಮಾನವನ್ನು ಅಭಿವೃದ್ಧಿ ಪಡಿಸಿರುವುದಾಗಿ ಹೇಳಿಕೊಂಡಿದ್ದು, ಡ್ರೋಣ್ ನ ಚಿತ್ರವನ್ನು ಕೂಡ ಬಿಡುಗಡೆ ಮಾಡಿದೆ. ಈ ಮಾನವ ರಹಿತ ಯುದ್ಧ ವಿಮಾನ ಡ್ರೋಣ್ ಸಮುದ್ರ ಹಾಗೂ ಭೂಮಿಯ ಮೇಲಿನ ಗುರಿಗಳನ್ನು ನಿಖರವಾಗಿ ಸ್ಫೋಟಿಸಿ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆಯಂತೆ. ಸಮುದ್ರ ಸಮರ ಹಾಗೂ ಕಣ್ಗಾವಲು ಉದ್ದೇಶಕ್ಕಾಗಿ ಈ ವಿನೂತನ ಆತ್ಮಹತ್ಯಾ ಡ್ರೋನ್ ಅನ್ನು ತಯಾರಿಸಲಾಗಿದ್ದು, ತನ್ನ ಗುರಿಗಳನ್ನು ಅತ್ಯಂತ ಕರಾರುವಕ್ಕಾಗಿ ಧ್ವಂಸ ಮಾಡುತ್ತದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ನೂತನ ಆತ್ಮಹತ್ಯಾ ಡ್ರೋಣ್ ವಿಮಾನ ಭಾರಿ ಪ್ರಮಾಣದ ಸ್ಫೋಟಕಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದು, ಸಮುದ್ರದ ನೀರಿನಿಂದ ಕೇವಲ ಎರಡು ಅಡಿ ಎತ್ತರದಲ್ಲಿ ಈ ಡ್ರೋನ್ ಗಂಟೆಗೆ 250 ಕಿ.ಮೀ. ವೇಗದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ ಕ್ಷಣಾರ್ಧದಲ್ಲಿ ಅದು ಸುಮಾರು 3,000 ಅಡಿ ಎತ್ತರವನ್ನೂ ತಲುಪಬಲ್ಲುದು ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಬಗ್ಗೆ ಇರಾನ್ ನ ತಸ್ನಿಮ್ ಪತ್ರಿಕೆ ವರದಿ ಮಾಡಿದ್ದು, ಪ್ರಸ್ತುತ ಇರಾನ್ ನ ರೆವಲ್ಯೂಷನರಿ ಗಾರ್ಡ್ಸ್ ಬಿಡುಗಡೆ ಮಾಡಿರುವ ಡ್ರೋಣ್ ವಿಮಾನ ಕ್ಷಿಪಣಿ ವಾಹಕ ಅಲ್ಲ, ಇದೊಂದು ಆತ್ಮಹತ್ಯಾ ಡ್ರೋಣ್ ಆಗಿದ್ದು, ಕೇವಲ ಸ್ಫೋಟಕಗಳನ್ನು ಮಾತ್ರ ಹೊತ್ತೊಯ್ಯುತ್ತದೆ. ಮುಂದಿನ ದಿನಗಳಲ್ಲಿ ಇದಕ್ಕೆ ಕ್ಷಿಪಣಿ ಅಳವಡಿಕೆ ಕುರಿತು ಚಿಂತಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
Advertisement