ಮೋದಿ ಆಜೆಂಡಾದಂತೆ ಪಾಕ್ ನಲ್ಲಿ ಆಡಳಿತ: ಷರೀಫ್ ವಿರುದ್ಧ ಇಮ್ರಾನ್ ಖಾನ್ ವಾಗ್ದಾಳಿ

ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಮೋದಿಯವರ ಅಜೆಂಡಾದಂತೆ ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿದ್ದಾರೆಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಅವರು ಭಾನುವಾರ...
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಮೋದಿಯವರ ಅಜೆಂಡಾದಂತೆ ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿದ್ದಾರೆಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖಂಡ ಇಮ್ರಾನ್ ಖಾನ್ ಅವರು ಭಾನುವಾರ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯೊಂದರಲ್ಲಿ ನವಾಜ್ ಷರೀಫ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಅನಾರೋಗ್ಯದಿಂದಾಗಿ ಲಂಡನ್ ನ ಆಸ್ಪತ್ರೆಗೆ ದಾಖಲಾದರೆ, ತಮ್ಮ ಅಮ್ಮ, ಇಲ್ಲವೇ ಮಕ್ಕಳಿಗೆ ಕರೆ ಮಾಡುವ ಬದಲು ಷರೀಫ್ ಅವರು ಮೊದಲು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕರೆ ಮಾಡಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನ ಪ್ರಧಾನಮಂತ್ರಿಗಳು ಮೋದಿಯವರ ಇಚ್ಛೆಗಳನ್ನು ಪಾಕಿಸ್ತಾನದಲ್ಲಿ ಜಾರಿಗೊಳಿಸುತ್ತಿದ್ದಾರೆ. ಮೋದಿಯವರ ಅಜೆಂಡಾದಂತೆಯೇ ಪಾಕಿಸ್ತಾನದಲ್ಲಿ ಆಡಳಿತವನ್ನು ನಡೆಸುತ್ತಿದ್ದಾರೆ. ನರೇಂದ್ರ ಮೋದಿ ಹಾಗೂ ಷರೀಫ್ ಇಬ್ಬರ ಗುರಿಯೂ ಒಂದೇ ಆಗಿದೆ ಎಂದು ಆರೋಪಿಸಿದ್ದಾರೆ.

ಇಂತಹ ಭ್ರಷ್ಟ ಪ್ರಧಾನಮಂತ್ರಿಯನ್ನು ರಕ್ಷಣೆ ಮಾಡಲು ದೇಶದ ಕಾರ್ಯತಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಶಂಕಿತನನ್ನು ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ನಾನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ನಾನು ಬದುಕಿರುವವರೆಗೂ ನವಾಜ್ ಶರೀಫ್ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಪರ್ವೇಜ್ ಮುಷರಫ್ ಅವರ ಸರ್ವಾಧಿಕಾರ ಆಡಳಿತಕ್ಕೂ, ಶರೀಫ್ ಅವರ ಪ್ರಜಾಪ್ರಭುತ್ವ ಆಡಳಿತಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಯಾವ ಕಾನೂನಿನ ಆಧಾರದ ಮೇಲೆ ನನ್ನ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಯಿತು ಎಂದು ಪ್ರಶ್ನೆ ಹಾಕಿದ್ದಾರೆ. ಕಾರ್ಯಕರ್ತರ ಬಿಡುಗಡೆ ಕುರಿತಂತೆ ನಮ್ಮ ಕಾನೂನು ತಂಡದವರು ನ್ಯಾಯಾಲಯದಲ್ಲಿ ಹೋರಾಟ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಪಾಕಿಸ್ತಾನ ಸೇನೆಯ ಭದ್ರತಾ ಮಾಹಿತಿಯ ಸೋರಿಕೆಯ ಹಿಂದೆ ನವಾಜ್ ಷರೀಫ್ ಅವರ ಕೈವಾಡವಿದೆ ಎಂದು ಆರೋಪಿಸಿರುವ ಅವರು, ಪರ್ವೇಜ್ ರಶೀದ್ ಅವರು ಸ್ವ-ಇಚ್ಛೆಯಿಂದ ಹಾಗೆ ಮಾಡಲು ಸಾಧ್ಯವಿಲ್ಲ. ನವಾಜ್ ಷರೀಫ್ ಅವರ ಆದೇಶದಂತೆಯೇ ರಶೀದ್ ಅವರು ನಡೆದುಕೊಂಡಿದ್ದಾರೆ. ರಶೀದ್ ಕೇವಲ ಒಬ್ಬ ಆದೇಶ ಪಾಲನೆ ಮಾಡುವ ವ್ಯಕ್ತಿಯಷ್ಟೇ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com