ಸಮುದ್ರದಲ್ಲೇ ಮಗುವಿಗೆ ಜನ್ಮ ನೀಡಿದ ಅಮೆರಿಕ ನೌಕಾಪಡೆ ಅಧಿಕಾರಿ!

ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡಲು ತೆರಳಿದ್ದ ಅಮೆರಿಕ ನೌಕಾಪಡೆಯ ಮಹಿಳಾ ಅಧಿಕಾರಿಯೊಬ್ಬರು ಸಮುದ್ರ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ನಡೆದಿದೆ.
ಪರ್ಷಿಯನ್ ಗಲ್ಫ್ ಸಮುದ್ರದಲ್ಲಿ ಅಮೆರಿಕ ನೌಕಾಪಡೆ ಕಾರ್ಯಾಚರಣೆ (ಸಂಗ್ರಹ ಚಿತ್ರ)
ಪರ್ಷಿಯನ್ ಗಲ್ಫ್ ಸಮುದ್ರದಲ್ಲಿ ಅಮೆರಿಕ ನೌಕಾಪಡೆ ಕಾರ್ಯಾಚರಣೆ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡಲು ತೆರಳಿದ್ದ ಅಮೆರಿಕ ನೌಕಾಪಡೆಯ ಮಹಿಳಾ ಅಧಿಕಾರಿಯೊಬ್ಬರು ಸಮುದ್ರ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ   ಘಟನೆ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ನಡೆದಿದೆ.

ಸ್ವತಃ ಈ ವಿಚಾರವನ್ನು ಅಮೆರಿಕ ನೌಕಾಪಡೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಅಮೆರಿಕದ ಕರಿಯರ್ ಏರ್ ವಿಂಗ್ 3 ವಿಭಾಗದ ಮಹಿಳಾ ಅಧಿಕಾರಿಯೊಬ್ಬರು ಕಳೆದ ಶನಿವಾರ ಹೆಣ್ಣುಮಗುವಿಗೆ  ಜನ್ಮ ನೀಡಿದ್ದಾರೆ. ನೌಕಾಪಡೆ ಅಧಿಕಾರಿಗಳ ಪ್ರಕಾರ ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಮಗು ಸುಮಾರು 3 ಕೆಜಿ 175 ಗ್ರಾಂ ತೂಕದಿಂದ (7 ಪೌಂಡ್) ಕೂಡಿದೆ ಎಂದು ಹೇಳಿದ್ದಾರೆ.  ಪರ್ಷಿಯನ್ ಗಲ್ಫ್ ಸಮುದ್ರದಲ್ಲಿ ನೌಕೆ ತೆರಳುತ್ತಿದ್ದಾಗ ಮಹಿಳಾ ಅಧಿಕಾರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಆಗ ನೌಕೆಯಲ್ಲಿದ್ದ ವೈದ್ಯಕೀಯ ಕೊಠಡಿಗೆ ಮಹಿಳಾ ಅಧಿಕಾರಿಯನ್ನು  ಕರೆದುಕೊಂಡು ಹೋಗಲಾಗಿದ್ದು, ಸುಮಾರು 7 ತಾಸುಗಳ ಬಳಿಕ ಅಧಿಕಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸಮುದ್ರದಲ್ಲೇ ಮಗುವಿಗೆ ಜನ್ಮ ನೀಡಿದ್ದರಿಂದ ಮಹಿಳಾ ಅಧಿಕಾರಿಯನ್ನು ಹಾಗೂ ಪುಟ್ಟ ಮಗುವನ್ನು ಏರ್ ಲಿಫ್ಟ್ ಮೂಲಕ ಬಹ್ರೇನ್ ಸೈನಿಕ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ. ಇನ್ನು ಈ ಬಗ್ಗೆ ತಮ್ಮ ಹೇಳಿಕೆ ನೀಡಿರುವ ಮಹಿಳಾ ಅಧಿಕಾರಿ ತಾವು ಗರ್ಭವತಿಯಾದ ವಿಚಾರ ತಿಳಿದಿತ್ತಾದರೂ ಈಗಲೇ ಮಗುವಿಗೆ ಜನ್ಮ ನೀಡುತ್ತೇನೆ ಎಂದು ತಿಳಿದಿರಲಿಲ್ಲ  ಎಂದು ಹೇಳಿದ್ದಾರೆ.

ಅಮೆರಿಕ ನೌಕಾ ಇಲಾಖೆಯ ಕಾನೂನಿನ ಪ್ರಕಾರ ಯಾವುದೇ ಕರ್ತವ್ಯ ನಿರತ ಮಹಿಳಾ ಅಧಿಕಾರಿ ಗರ್ಭ ಧರಿಸಿದರೆ, ಆಕೆ ಗರ್ಭ ಧರಿಸಿದ ಮೊದಲ 20 ವಾರಗಳವರೆಗೂ ಸೇವೆಗೆ  ಹಾಜರಾಗಬಹುದಾಗಿದೆ. 20 ವಾರಗಳ ಬಳಿಕ ಇಂತಹ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com