ಅಮೆರಿಕದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಮಾರಾಟ ಇನ್ನು ಕಾನೂನು ಬಾಹಿರ!

ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಮುಖಭಂಗವಾಗಿದ್ದು, ತನ್ನ ನೂತನ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ ಫೋನ್ ಅನ್ನು ಅಮೆರಿಕದಲ್ಲಿ ನಿಷೇಧಿಸಲಾಗಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 (ಸಂಗ್ರಹ ಚಿತ್ರ)
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 (ಸಂಗ್ರಹ ಚಿತ್ರ)

ವಾಷಿಂಗ್ಟನ್: ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಸ್ಯಾಮ್ ಸಂಗ್ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಮುಖಭಂಗವಾಗಿದ್ದು, ತನ್ನ ನೂತನ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್  ಫೋನ್ ಅನ್ನು ಅಮೆರಿಕದಲ್ಲಿ ನಿಷೇಧಿಸಲಾಗಿದೆ.

ದಕ್ಷಿಣ ಕೊರಿಯಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಸಾಮ್ಯ್ ಸಂಗ್ ನೂತನ ಗ್ಯಾಲಕ್ಸಿ ನೋಟ್ 7 ಮೊಬೈಲ್ ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಇದರಿಂದಾಗಿ ಮೊಬೈಲ್  ಸ್ಫೋಟಗೊಂಡ ಕುರಿತು ವಿಶ್ವಾದ್ಯಂತ ವ್ಯಾಪಕ ದೂರುಗಳು ಬಂದಿದ್ದವು. ಇದರ ಬೆನ್ನಲ್ಲೇ ಸ್ವತಃ ಸ್ಯಾಮ್ ಸಂಗ್ ಕೂಡ ತನ್ನ ನೋಟ್ 7 ಮೊಬೈಲ್ ಗಳನ್ನು ಹಿಂದಕ್ಕೆ ಪಡೆಯುವುದಾಗಿ ಅಧಿಕೃತ  ಹೇಳಿಕೆ ನೀಡಿತ್ತು.

ಈ ವಿಚಾರ ಹಸಿರಾಗಿರುವಾಗಲೇ ಸ್ಯಾಮ್ ಸಂಗ್ ಸಂಸ್ಥೆಗೆ ಅಮೆರಿಕದ ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗ ಬರೆ ಎಳೆದಿದ್ದು, ಗ್ಯಾಲಕ್ಸಿ ನೋಟ್ 7 ಮೊಬೈಲ್ ಮಾರಾಟ ಕಾನೂನು  ಬಾಹಿರಗೊಳಿಸಿ ಆದೇಶ ಹೊರಡಿಸಿದೆ. ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗದ ಅಧ್ಯಕ್ಷ ಎಲಿಯಟ್ ಕಾಯೆ ಅವರು ಈ ಬಗ್ಗೆ ಮಾತನಾಡಿ, ದೋಷ ಪೂರಿತ ಉತ್ಪನ್ನಗಳನ್ನು ವಾಪಸ್  ಪಡೆಯುವುದು ಉತ್ತಮವೇ ಆದರೂ, ಅದಕ್ಕಿಂತಲೂ ಕಠಿಣ ಕ್ರಮಗಳ ಅಗತ್ಯತೆ ಇದೆ. ಹೀಗಾಗಿ ನೋಟ್ 7 ಮೊಬೈಲ್ ಮಾರಾಟವನ್ನು ಕಾನೂನು ಬಾಹಿರಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಮೊಬೈಲ್ ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿತ್ತಾದರೂ, ಅಲ್ಪ ಅವದಿಯಲ್ಲಿಯೇ ವಿಶ್ವಾದ್ಯಂತ ಸುಮಾರು 2.5 ಮಿಲಿಯನ್ ಮೊಬೈಲ್ ಗಳು  ಮಾರಾಟವಾಗಿದ್ದವು. ಈ ಪೈಕಿ 1 ಮಿಲಿಯನ್ ಮೊಬೈಲ್ ಗಳು ಅಮೆರಿಕದಲ್ಲಿಯೇ ಮಾರಾಟವಾಗಿದ್ದವು. ಬಳಿಕ ತಾಂತ್ರಿಕ ದೋಷದಿಂದಾಗಿ ಈ ವರೆಗೂ ಸುಮಾರು 150ಕ್ಕೂ ಹೆಚ್ಚು ಮೊಬೈಲ್  ಗಳು ಸ್ಫೋಟಗೊಂಡ ಕುರಿತು ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಸ್ಯಾಮ್ ಸಂಗ್ ಸಂಸ್ಥೆ ತನ್ನ ಮೊಬೈಲ್ ವಾಪಸ್ ಪಡೆದು ಗ್ರಾಹಕರಿಗೆ ಹಣ ವಾಪಸ್ ಮಾಡುವುದಾಗಿ  ಹೇಳಿತ್ತು.

ಇನ್ನು 92 ದೂರುಗಳಲ್ಲಿ ಬ್ಯಾಟರ್ ಓವರ್ ಹೀಟ್ ಕುರಿತಾಗಿದ್ದರೆ, 26 ದೂರುಗಳಲ್ಲಿ ಮೊಬೈಲ್ ನಿಂದ ಬೆಂಕಿ ಹೊತ್ತ ಕುರಿತು ದೂರುಗಳು ದಾಖಲಾಗಿವೆ. ಇನ್ನು 55 ಪ್ರಕರಣಗಳಲ್ಲಿ ಮೊಬೈಲ್ ನಿಂದ  ಹೊತ್ತ ಬೆಂಕಿಯಿಂದಾಗಿ ಆಸ್ತಿ ನಷ್ಟವಾದ ಕುರಿತೂ ಕೂಡ ದೂರು ದಾಖಲಾಗಿವೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಅಮೆರಿಕದ ಗ್ರಾಹಕ ಉತ್ಪನ್ನ ರಕ್ಷಣಾ ಆಯೋಗ ಗ್ಯಾಲಕ್ಸಿ ನೋಟ್ 7  ಮೇಲೆ ನಿಷೇಧ ಹೇರಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com