
ಮಾಸ್ಕೋ: ಪಾಕಿಸ್ತಾನ- ರಷ್ಯಾದ ಜಂಟಿ ಸೇನಾ ತಾಲೀಮಿನ ಬಗ್ಗೆ ಭಾರತ ಆತಂಕ ಪಡುವ ಅಗತ್ಯವಿಲ್ಲ ಎಂದು ರಷ್ಯಾದ ಹಿರಿಯ ರಾಜತಾಂತ್ರಿಕ ಅಧಿಕಾರಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪಾಕಿಸ್ತಾನದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಪಾಕ್- ರಷ್ಯಾದ ಜಂಟಿ ಸೇನಾ ತಾಲೀಮು ವಿವಾದಿತ ಪ್ರದೇಶದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಭಾರತ ಈ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ರಷ್ಯಾದ ವಿದೇಶಾಂಗ ಇಲಾಖೆಯ ನಿರ್ದೇಶಕ ಜಮೀರ್ ಕಬುಲೊವ್ ತಿಳಿಸಿದ್ದಾರೆ.
ಪಾಕ್- ರಷ್ಯಾದ ಜಂಟಿ ಸೇನಾ ತಾಲೀಮನ್ನು ಫ್ರೆಂಡ್ಶಿಪ್- 2016 ಎಂದು ಹೆಸರಿಸಲಾಗಿದ್ದು, ಯುದ್ಧತಂತ್ರದ ಅಭ್ಯಾಸ ಸೆಪ್ಟೆಂಬರ್ 24 ರಿಂದ ಅಕ್ಟೊಬರ್ 7 ವರೆಗೆ ನಡೆಯಲಿದೆ. ಭಾರತ- ಪಾಕಿಸ್ತಾನದ ವಿವಾದಿತ ಪ್ರದೇಶದಲ್ಲಿ ಈ ಸೇನಾ ಅಭ್ಯಾಸ ನಡೆಸುತ್ತಿಲ್ಲ. ಆದ್ದರಿಂದ ಭಾರತ ಆತಂಕ ಪಡುವುದಕ್ಕೆ ಕಾರಣಗಳಿಲ್ಲ ಅಲ್ಲದೆ, ರಷ್ಯಾ ಈ ಜಂಟಿ ಸೇನಾ ತಾಲೀಮು ನಡೆಯುವ ಪ್ರದೇಶದ ಬಗ್ಗೆ ಈ ಹಿಂದೆಯೇ ಭಾರತಕ್ಕೆ ಮಾಹಿತಿ ನೀಡಿತ್ತು ಎಂದು ಜಮೀರ್ ಕಬುಲೊವ್ ತಿಳಿಸಿದ್ದಾರೆ.
ಜಂಟಿ ಸೇನಾ ತಾಲೀಮಿನಲ್ಲಿ 200 ಸೇನಾ ಸಿಬ್ಬಂದಿ ಭಾಗವಹಿಸಲಿದ್ದು, ಪಾಕಿಸ್ತಾನ- ರಷ್ಯಾ ನಡುವಿನ ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಗೊಳಿಸುವುದಕ್ಕೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನ ರಷ್ಯಾದ ಯುದ್ಧ ವಿಮಾನಗಳನ್ನು ಖರೀದಿಸಲು ಚಿಂತನೆ ನಡೆಸಿರುವ ಸಂದರ್ಭದಲ್ಲಿ ಜಂಟಿ ಸೇನಾ ತಾಲೀಮು ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ.
Advertisement