ಅಣ್ವಸ್ತ್ರಗಳನ್ನು ಕಡಿಮೆಗೊಳಿಸಲು ಅಮೆರಿಕ ಸಲಹೆಯನ್ನು ತಿರಸ್ಕರಿಸಿದ ಪಾಕಿಸ್ತಾನ

ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ನೀಡಿರುವ ಹೇಳಿಕೆಯನ್ನು ನೋಡೊದರೆ ಭಾರತ ಸರ್ಕಾರ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದೆನಿಸದೆ ಇರದು.
ಅಣ್ವಸ್ತ್ರಗಳನ್ನು ಕಡಿಮೆಗೊಳಿಸಲು ಅಮೆರಿಕ ಸಲಹೆಯನ್ನು ತಿರಸ್ಕರಿಸಿದ ಪಾಕಿಸ್ತಾನ
ಅಣ್ವಸ್ತ್ರಗಳನ್ನು ಕಡಿಮೆಗೊಳಿಸಲು ಅಮೆರಿಕ ಸಲಹೆಯನ್ನು ತಿರಸ್ಕರಿಸಿದ ಪಾಕಿಸ್ತಾನ

ನ್ಯೂಯಾರ್ಕ್: ಗಡಿ ಭಾಗಾದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದಕ ದಾಳಿಯನ್ನು ಎದುರಿಸಲು ಭಾರತ ಸರ್ಕಾರ ಸೇನೆ ಬಳಕೆಯನ್ನೇ ಆಯ್ಕೆಯಾಗಿರಿಸಿಕೊಂಡಿದೆ. ಆದರೆ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ನೀಡಿರುವ ಹೇಳಿಕೆಯನ್ನು ನೋಡೊದರೆ ಭಾರತ ಸರ್ಕಾರ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದೆನಿಸದೆ ಇರದು.

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ವೇಳೆ, ಜಾನ್ ಕೆರ್ರಿ, ಅಣ್ವಸ್ತ್ರಗಳನ್ನು ಸೀಮಿತಗೊಳಿಸುವಂತೆ ಸಲಹೆ ನೀಡಿದ್ದಾರೆ. ಆದರೆ ಪಾಕಿಸ್ತಾನ ಅಮೆರಿಕದ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

ಜಾನ್ ಕೆರ್ರಿ, ನವಾಜ್ ಷರೀಫ್ ಮಾತುಕತೆ ಬಳಿಕ ನ್ಯೂಯಾರ್ಕ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ಕಾಯಂ ಪ್ರತಿನಿಧಿ, ಮಲಿಹಾ ಲೋಧಿ, ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗಳಿಗೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

"ಪಾಕಿಸ್ತಾನದ ಅಣ್ವಸ್ತ್ರಗಳನ್ನು ಕಡಿಮೆ ಮಾಡುವಂತೆ ಜಾನ್ ಕೆರ್ರಿ ಸಲಹೆ ನೀಡಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಜವಾಜ್ ಷರೀಫ್, ಪಾಕಿಸ್ತಾನದಿಂದ ಏನನ್ನು ನಿರೀಕ್ಷಿಸುತ್ತಿದ್ದೀರೋ ಅದನ್ನು ಭಾರತದಿಂದಲೂ ಜಾರಿಗೊಳಿಸಿ" ಎಂದು ಹೇಳಿರುವುದಾಗಿ ಮಲಿಹಾ ಲೋಧಿ ತಿಳಿಸಿದ್ದಾರೆ. ಭಾರತ ಕೈಗೊಂಡಿರುವ ಅಣ್ವಸ್ತ್ರ ಚಟುವಟಿಕೆಗಳಿಗೆ ಅಂತಾರಾಷ್ಟ್ರೀಯ ಸಮುದಾಯ ಮೊದಲು ಕಡಿವಾಣ ಹಾಕುವಂತೆ ಲೋಧಿ ಮನವಿ ಮಾಡಿದ್ದಾರೆ. ಇದೇ ವೇಳೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌಧರಿ, ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ನಡೆಸಿರುವ ಹೋರಾಟವನ್ನು ಬಹುಶಃ ಬೇರೆ ಯಾವ ದೇಶಗಳೂ ನಡೆಸಿಲ್ಲ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ 71 ನೇ ಮಹಾಧಿವೇಶನ ನಡೆಯುವುದಕ್ಕೆ ಮುನ್ನ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದು, ಪಾಕ್ ಪ್ರಧಾನಿ ಅಧಿವೇಶನದಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ಇದೇ ವೇಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸಿರುವ ಭಯೋತ್ಪಾದನೆ ಬಗ್ಗೆ ಮಾತನಾಡಲಿದ್ದಾರೆ.

ಇದಕ್ಕೂ ಮೊದಲು ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವ ಮಸೂದೆಯನ್ನು ಅಮೆರಿಕ ಮಂಡಿಸಿರುವುದು ಪಾಕಿಸ್ತಾನಕ್ಕೆ ಆತಂಕಕಾರಿ ಬೆಳವಣಿಗೆಯಾಗಿದ್ದು, ವಿಶ್ವಸಂಸ್ಥೆಯಲ್ಲಿ ನವಾಜ್ ಷರೀಫ್ ಭಾಷಣದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com