
ನವದೆಹಲಿ: ಉರಿ ಉಗ್ರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತದ ಹೀರೋಯಿಸಂ ಬಾಲಿವುಡ್ ಸಿನಿಮಾಗಳಿಗಷ್ಟೇ ಸೀಮಿತ ಎಂದು ಜೈಶ್ ಇ ಮಹಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಹೇಳಿದ್ದಾನೆ.
ಉರಿ ಉಗ್ರದಾಳಿ ಕುರಿತಂತೆ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿ ನೆಲೆಗಳ ಮೇಲೆ ದಾಳಿ ಮಾಡಬಹುದು ಎಂಬ ಹಿನ್ನಲೆಯಲ್ಲಿ ಮಾತನಾಡಿರುವ ಉಗ್ರನಾಯಕ ಈ ಬಗ್ಗೆ ಆಡಿಯೋ ಟೇಪ್ ಬಿಡುಗಡೆ ಮಾಡಿದ್ದಾನೆ. ಸಂಘಟನೆಯ ಮುಖವಾಣಿ ರಂಗೊನೂರ್ ನ ಆನ್ ಲೈನ್ ತಾಣದಲ್ಲಿ ಬಿಡುಗಡೆ ಮಾಡಿರುವ ಆಡಿಯೋ ಟೇಪ್ ನಲ್ಲಿ ಭಾರತೀಯ ಸೇನೆಯ ಸಾಮರ್ಥ್ಯವನ್ನು ವ್ಯಂಗ್ಯವಾಡಿರುವ ಮಸೂದ್, ಭಾರತ ನಾಯಕರ ಆಕ್ರೋಶ ಅವರ ಬಾಲಿವುಡ್ ಸಿನಿಮಾಗಳಿಗೇ ಸೀಮಿತ. ತಮ್ಮ ನೆರಳಿಗೆ ತಾವೇ ಹೆದರುವ ಬಾಲಿವುಡ್‌ನ ಹೀರೋಗಳು, ಚಲನಚಿತ್ರಗಳಲ್ಲಿ ಪಾಕಿಸ್ತಾನವನ್ನು ದುರ್ಬಲ ಎಂದು ತೋರಿಸಿ ತಮ್ಮನ್ನು ತಾವು ಹೀರೋಗಳ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಾರೆ. ಸಿನಿಮಾಗಳಲ್ಲಿ ಹೀರೋಗಳು ಪಾಕಿಸ್ತಾನದೊಳಗೆ ನುಗ್ಗಿ ನಮ್ಮ ಕ್ಯಾಂಪ್ ಗಳನ್ನು ನಾಶಪಡಿಸಿ, ಮುಜಾಹಿದೀನ್‌ಗಳನ್ನು ಕೊಲ್ಲುತ್ತಾರೆ. ಇಷ್ಟೆಲ್ಲ ಆದರೂ ಒಂದೇ ಒಂದು ಗುಂಡು ಕೂಡ ಅವರ ಮೈಗೆ ತಾಕುವುದಿಲ್ಲ. ಆದರೆ ಅವರ ಒಂದೇ ಒಂದು ಗುಂಡು ಇಡೀ ಮುಜಾಹಿದೀನ್ ಗಳನ್ನು ನಾಶಪಡಿಸುತ್ತದೆ.
ಭಾರತದ ಇಂತಹ ಹೀರೋಯಿಸಂ ಚಿತ್ರಗಳಿಗಷ್ಟೇ ಸೀಮಿತ. ಭಾರತೀಯ ಸೇನೆ ಯಾವುದೇ ಕಾರಣಕ್ಕೂ ಪಾಕಿಸ್ತಾನವನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಆ ಸಾಮರ್ಥ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾನೆ.
Advertisement