ಸಿಬ್ಬಂದಿಗೆ ಸೀಟಿನ ವ್ಯವಸ್ಥೆ ಕಲ್ಪಿಸಲು ಪ್ರಯಾಣಿಕನ ಹೊಡೆದು ಹೊರಗೆ ಹಾಕಿದ ಅಮೆರಿಕ ವಿಮಾನಯಾನ ಸಂಸ್ಥೆ!

ವಿಮಾನಯಾನ ಸಿಬ್ಬಂದಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ಮಾಡಿ ವಿಮಾನದಿಂದ ಹೊರ ಹಾಕಿರುವ ಘಟನೆ ಅಮೆರಿಕದ ಚಿಕಾಗೋದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರ
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರ

ಚಿಕಾಗೋ: ವಿಮಾನಯಾನ ಸಿಬ್ಬಂದಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ಮಾಡಿ ವಿಮಾನದಿಂದ ಹೊರ ಹಾಕಿರುವ ಘಟನೆ ಅಮೆರಿಕದ ಚಿಕಾಗೋದಲ್ಲಿ ನಡೆದಿದೆ.

ಅಮೆರಿಕ ಪ್ರತಿಷ್ಟಿತ ವಿಮಾನಯಾನ ಸಂಸ್ಥೆ ಯುನೈಟೆಡ್ ಏರ್ ಲೈನ್ಸ್ ಸಂಸ್ಥೆಯ ಸಿಬ್ಬಂದಿಗಳ ಅಮಾನವೀಯ ವರ್ತನೆಯನ್ನು ಸಹ ಪ್ರಯಾಣಿಕರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲಾತಣದಲ್ಲಿ ಹರಿಬಿಟ್ಟಿದ್ದಾರೆ.   ಭಾನುವಾರ ಚಿಕಾಗೋದ ಓ’ಹರೆ ವಿಮಾನ ನಿಲ್ದಾಣದಿಂದ ಕೆಂಟಕಿಗೆ ಹೊರಟಿದ್ದ ಯುನೈಟೆಡ್ ವಿಮಾನ ಟೇಕ್ ಆಫ್ ಗೆ ಸಿದ್ದವಾಗಿರುವ ಹೊತ್ತಿನಲ್ಲೇ ವಿಮಾನದೊಳಗೆ ಆಗಮಿಸಿದ ಕೆಲ ಸಿಬ್ಬಂದಿಗಳು ಹಾಗೂ ಪೊಲೀಸ್  ಸಿಬ್ಬಂದಿಗಳು ಏರ್‌ ಲೈನ್ಸ್‌ನ ನಾಲ್ವರು ಸಿಬ್ಬಂದಿಗೆ ಆಸನದ ವ್ಯವಸ್ಥೆ ಮಾಡುವ ಸಲುವಾಗಿ ಪ್ರಯಾಣಿಕರಲ್ಲಿ ಸೀಟು ಬಿಟ್ಟು ಕೊಡುವಂತೆ ಕೇಳಿದ್ದಾರೆ. ಈ ವೇಳೆ ಸೀಟು ಬಿಟ್ಟು ಕೊಡುವವರಿಗೆ ಹೊಟೇಲ್‌ ನಲ್ಲಿ ಉಳಿಯುವ ವ್ಯವಸ್ಥೆ,  400 ಅಮೆರಿಕನ್‌ ಡಾಲರ್‌ ಹಾಗೂ 800 ಅಮೆರಿಕನ್‌ ಡಾಲರ್‌ ವೋಚರ್‌ಗಳನ್ನು ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಆದರೆ ಯಾವುದೇ ವಿಮಾನದಲ್ಲಿ ಕುಳಿತಿದ್ದ ಯಾವುದೇ ಪ್ರಯಾಣಿಕರೂ ಕೂಡ ಆಸನ ಬಿಟ್ಟು ಕೊಡಲು ಮುಂದೆ  ಬಂದಿರಲಿಲ್ಲ.

ಈ ವೇಳೆ ಸಿಬ್ಬಂದಿಗಳು ನಾಲ್ಕು ಪ್ರಯಾಣಿಕರ ಹೆಸರು ಕೂಗಿ ಆಸನ ಬಿಟ್ಟುಕೊಡುವಂತೆ ಹೇಳಿದ್ದಾರೆ. ನಾಲ್ವರ ಪೈಕಿ ಮೂವರು ಆಸನ ಬಿಟ್ಟುಕೊಟ್ಟಿದ್ದು, ದಕ್ಷಿಣ ಏಷ್ಯಾ ಮೂಲದ ಪ್ರಯಾಣಿಕರೊಬ್ಬರು ಮಾತ್ರ ಆಸನ ಬಿಡಲು  ನಿರಾಕರಿಸಿದ್ದಾರೆ. ತಮಗೆ ಅನಿವಾರ್ಯ ಕೆಲಸವಿದ್ದು ಕೂಡಲೇ ವಿಮಾನ ಪ್ರಯಾಣ ಮಾಡಬೇಕಿದೆ. ಹೀಗಾಗಿ ತಾವು ಆಸನ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಗ ಏರ್ ಲೈನ್ಸ್ ಸಿಬ್ಬಂದಿ ಪೊಲೀಸರನ್ನು ಕರೆಸಿದ್ದಾರೆ.  ವಿಮಾನದೊಳಗೆ ಬಂದ ಪೊಲೀಸರು ಹಿಂದೂ ಮುಂದು ನೋಡದೇ ಪ್ರಯಾಣಿಕನನ್ನು ಹಿಡಿದು ಥಳಿಸಿ, ನೆಲಕ್ಕೆ ಉರುಳಿಸಿ ವಿಮಾನದಿಂದ ಹೊರಗೆ ಎಳೆದೊಯ್ದಿದ್ದಾರೆ. ಈ ವೇಳೆ ಪ್ರಯಾಣಿಕನ ತುಟಿ ಮತ್ತು ಮೂಗಿಗೆ ಗಂಭೀರ  ಗಾಯವಾಗಿ ರಕ್ತಹರಿದಿದೆ.

ಪ್ರಯಾಣಿಕರನ್ನು ಥಳಿಸುತ್ತಿರುವಾಗ ಇತರೆ ಪ್ರಯಾಣಿಕರು ತಡೆಯಲೆತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಅಲ್ಲಿದ್ದವರ ಪೈಕಿ ಕೆಲವರು ಇದನ್ನು ತಮ್ಮ ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದಿದ್ದು, ಸಮಾಜಿಕ ಜಾಲತಾಣಗಳಲ್ಲಿ  ಹರಿಬಿಟ್ಟಿದ್ದಾರೆ. ಇದೀಗ ಯುನೈಟೆಡ್ ಏರ್ ಲೈನ್ಸ್ ಸಂಸ್ಥೆಯ ಸಿಬ್ಬಂದಿಗಳ ಕ್ರೌರ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತಿರುವ ಚಿಕಾಗ ಸರ್ಕಾರ ಕೂಡಲೇ ಪ್ರಯಾಣಿಕರನ್ನು ಥಳಿಸಿದ ಆರೋಪ ಎದುರಿಸುತ್ತಿರುವ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ. ಅಂತೆಯೇ  ಯುನೈಟೆಡ್ ಏರ್ ಲೈನ್ಸ್ ಸಂಸ್ಥೆ ಕೂಡ ಟ್ವಿಟರ್ ನಲ್ಲಿ ಕ್ಷಮೆ ಕೋರಿದ್ದು, ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಪ್ರಯಾಣಿಕರಿಗೆ ಆಶ್ವಾಸನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com