ಇಸ್ಲಾಮಾಬಾದ್: ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹದಗೆಡಲು ಭಾರತ ಕಾರಣ ಎಂದು ಪಾಕಿಸ್ತಾನದ ನೂತನ ಪ್ರಧಾನಿ ಶಾಹೀದ್ ಖಕನ್ ಅಬ್ಬಾಸಿ ಅವರು ಸೋಮವಾರ ಆರೋಪಿಸಿದ್ದಾರೆ.
ಇಂದು 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ ಅಬ್ಬಾಸಿ, ನವದೆಹಲಿಯ ವಿಸ್ತರಣಾವಾದಿ ವಿನ್ಯಾಸಗಳಿಂದ ಉಭಯ ದೇಶಗಳ ರಚನಾತ್ಮಕ ಸಂಬಂಧಕ್ಕೆ ಪ್ರಮುಖ ಅಡಚಣೆಯಾಗಿದೆ ಎಂದಿದ್ದಾರೆ.
ಸಾರ್ವಭೌಮ ಸಮಾನತೆಯ ಆಧಾರದ ಮೇಲೆ ಪಾಕಿಸ್ತಾನ ಎಲ್ಲಾ ದೇಶಗಳೊಂದಿಗೆ ಧನಾತ್ಮಕ ಮತ್ತು ರಚನಾತ್ಮಕ ಸಂಬಂಧಗಳನ್ನು ಬಯಸುತ್ತದೆ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.
ನಮ್ಮ ಸರ್ಕಾರ ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಶಾಂತಿಯುತ ವಿಧಾನಗಳನ್ನು ಅನುಸರಿಸಿದೆ. ಆದರೆ ದುರದೃಷ್ಟವಶಾತ್ ಭಾರತದ ವಿಸ್ತರಣಾವಾದಿ ಸಿದ್ಧಾಂತ ಇದಕ್ಕೆ ಅಡ್ಡಿಯಾಗಿದೆ ಎಂದು ಅಬ್ಬಾಸಿ ಹೇಳಿದ್ದಾರೆ.
ಈ ವೇಳೆ 70ನೇ ಸ್ವಾತಂತ್ರ್ಯೋತ್ಸವದ ವಿಶೇಷ ಅತಿಥಿಯಾಗಿ ಚೀನಾದ ಉಪ ಪ್ರಧಾನಿ ವಾಂಗ್ ಯಾಂಗ್ ಅವರು ಭಾಗವಹಿಸಿದ್ದರು.