
ಕಾಬುಲ್: ಆಫ್ಘಾನಿಸ್ತಾನಕ್ಕೆ ಅಮೆರಿಕ ಸರ್ಕಾರ ಹೆಚ್ಚುವರಿ ಸೇನಾಪಡೆಗಳನ್ನು ರವಾನಿಸುವ ಮೂಲಕ ಆಫ್ಘಾನಿಸ್ತಾನವನ್ನು ತನ್ನ ಸೈನಿಕರ ಕಬರಿಸ್ಥಾನವನ್ನಾಗಿಸಿಕೊಳ್ಳುತ್ತದೆ ಎಂದು ತಾಲಿಬಾನ್ ಉಗ್ರ ಸಂಘಟನೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸರ್ಕಾರದ ದಕ್ಷಿಣ ಏಷ್ಯಾ ಬಗೆಗಿನ ನೂತನ ಭದ್ರತಾ ನೀತಿಯನ್ನು ಪ್ರಕಟಿಸಿದ ಬೆನ್ನಲ್ಲೇ ಅಮೆರಿಕಕ್ಕೆ ಎಚ್ಚರಿಕೆ ನೀಡಿರುವ ತಾಲಿಬಾನ್, ಆಫ್ಘಾನಿಸ್ತಾನಕ್ಕೆ ಹೆಚ್ಚುವರಿ ಸೈನಿಕರನ್ನು ರವಾನೆ ಮಾಡುವ ಮೂಲಕ ಅಮೆರಿಕ ತನ್ನ ಸೈನಿಕರ ಸಮಾಧಿಯನ್ನು ಅಮೆರಿಕದಲ್ಲಿ ಸೃಷ್ಟಿ ಮಾಡುತ್ತಿದೆ ಎಂದು ಕಿಡಿಕಾರಿದೆ. ಇದೇ ವೇಳೆ ಎಷ್ಟೇ ಸೈನಿಕರು ಆಫ್ಘಾನಿಸ್ತಾನಕ್ಕೆ ಆಗಮಿಸಿದರೂ ಅವರು ತಾಲಿಬಾನ್ ಹೋರಾಟಗಾರರ ಕೈಯಲ್ಲಿ ಹತರಾಗುತ್ತಾರೆ ಎಂದು ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಝೈಬುಲ್ಲಾ ಮುಜಾಹಿದ್, ಅಫ್ಘಾನಿಸ್ಥಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂದೆಗೆಯದಿದ್ದರೆ ಅಫ್ಘಾನಿಸ್ಥಾನವು 21ನೇ ಶತಮಾನದ ಸೂಪರ್ ಪವರ್ ಎನಿಸಿರುವ ಅಮೆರಿಕದ ಪಾಲಿಗೆ ಕಬರಿಸ್ಥಾನವಾಗಲಿದೆ. ಆಫ್ಘಾನಿಸ್ಥಾನದಲ್ಲಿರುವ ಪ್ರತೀಯೊಬ್ಬ ಅಮೆರಿಕ ಸೈನಿಕ ಕೂಡ ಇಲ್ಲೇ ಸಮಾಧಿ ಸೇರುತ್ತಾನೆ. ಹೀಗಾಗಿ ಅಫ್ಘಾನಿಸ್ಥಾನದಲ್ಲಿ ಯುದ್ಧವನ್ನು ಮುಂದುವರಿಸುವ ಬದಲು ಅಮೆರಿಕ ಇಲ್ಲಿಂದ ತನ್ನ ಸೇನೆಯನ್ನು ಹಿಂದೆಗೆಯುವ ಕ್ರಮ ಕೈಗೊಳ್ಳಬೇಕು. ನಮ್ಮ ನೆಲದಲ್ಲಿ ಅಮೆರಿಕನ್ ಸೈನಿಕರು ಇರುವಷ್ಟು ಕಾಲ ಮತ್ತು ಅವರು ನಮ್ಮ ಮೇಲೆ ಯುದ್ಧವನ್ನು ಹೇರುವ ತನಕ ನಾವು ಅತ್ಯುನ್ನತ ನೈತಿಕ ಸ್ಥೈರ್ಯದೊಂದಿಗೆ ಜಿಹಾದ್ ಮುಂದುವರಿಸುತ್ತೇವೆ ಎಂದು ಝೈಬುಲ್ಲಾ ಗುಡುಗಿದ್ದಾನೆ.
Advertisement