ಆಫ್ಘಾನಿಸ್ಥಾನದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಭಾರತ ನೆರವು ಅಗತ್ಯ: ಟಿಲ್ಲರ್ಸನ್
ವಾಷಿಂಗ್ಟನ್: ಆಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಭಾರತದ ನೆರವು ಅಗತ್ಯ ಎಂದು ಅಮೆರಿಕ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಹೇಳಿದ್ದಾರೆ.
ಉಗ್ರರ ಹಾವಳಿಯಿಂದ ನಲುಗಿ ಹೋಗಿರುವ ಆಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಮಿತ್ರ ಪಡೆಗಳನ್ನು ಮುಂದುವರೆಸಬೇಕೇ ಅಥವಾ ಹಿಂದಕ್ಕೆ ಕರೆಸಿಕೊಳ್ಳಬೇಕೇ ಎಂಬ ವಿಚಾರದ ಕುರಿತು ಮಂಗಳವಾರ ಶ್ವೇತಭಙವನದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಟಿಲ್ಲರ್ಸನ್, ಟ್ರಂಪ್ ಆಡಳಿತ ಪಾಕಿಸ್ತಾನ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಯಸುತ್ತದೆ. ಪಾಕಿಸ್ತಾನ ಉಗ್ರರ ಸ್ವರ್ಗವಾಗಿ ಮಾರ್ಪಟ್ಟಿದ್ದು, ದಕ್ಷಿಣ ಏಷ್ಯಾದಲ್ಲಿ ಸಂಭವಿಸುವ ಯಾವುದೇ ಉಗ್ರ ದಾಳಿಗೂ ಪಾಕಿಸ್ತಾನದ ನಂಟು ಇರುತ್ತದೆ. ಹೀಗಾಗಿ ಪಾಕಿಸ್ತಾನ ತನ್ನ ನೆಲದಲ್ಲಿನ ಉಗ್ರ ಚಟುವಟಿಕೆಯನ್ನು ಕೂಡಲೇ ಮಟ್ಟ ಹಾಕಬೇಕು ಎಂಬುದು ಅಮೆರಿಕ ಸರ್ಕಾರದ ಬಯಕೆಯಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗಾಗಿ ಅಮೆರಿಕ ಹೊಸ ಕಾರ್ಯಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಅಫ್ಘಾನಿಸ್ತಾನದಲ್ಲಿರುವ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಉಗ್ರ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯಾಚರಣೆಗಳನ್ನು ನಡೆಸುವ ಕುರಿತು ಟಿಲ್ಲರ್ಸನ್ ಮಾಹಿತಿ ನೀಡಿದರು.
ಇದೇ ವೇಳೆ ಆಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಛಿರತೆ ಕಾಯ್ದುಕೊಳ್ಳುವಲ್ಲಿ ಭಾರತ ಪಾತ್ರವನ್ನು ಶ್ಲಾಘಿಸಿದ ಟಿಲ್ಲರ್ಸನ್, ಭಾರತ ಅಮೆರಿಕದ ಅತೀ ದೊಡ್ಡ ಮಿತ್ರ ರಾಷ್ಟ್ರವಾಗಿದೆ. ಆಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತ ಕಾಯ್ದೊಳ್ಳುವಲ್ಲಿ ಭಾರತ ಪಾತ್ರ ಶ್ಲಾಘನೀಯವಾಗಿದೆ. ಆಫ್ಘಾನಿಸ್ತಾನಕ್ಕೆ ಆರ್ಥಿಕ ನೆರವು ಮತ್ತು ಅಭಿವೃದ್ಧಿಕಾರ್ಯಗಳನ್ನು ಮಾಡುವ ಮೂಲಕ ಭಾರತ ಅಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇದೇ ವೇಳೆ ಆಫ್ಘಾನಿಸ್ತಾನವೂ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಅಮೆರಿಕ ತನ್ನ ನೂತನ ರಕ್ಷಣಾ ಕಾರ್ಯತಂತ್ರ ಅಳವಡಿಕೆಗೆ ಭಾರತದ ನೆರವು ಅಗತ್ಯ ಎಂದು ಟಿಲ್ಲರ್ಸನ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ