ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಅವರನ್ನು ಭೇಟಿಯಾಗುವುದಕ್ಕೆ ಅವರ ತಾಯಿ ಹಾಗೂ ಪತ್ನಿಗೆ ವೀಸಾ ನೀಡುವಂತೆ ಪಾಕಿಸ್ತಾನ ಸರ್ಕಾರ ಗುರುವಾರ ದೆಹಲಿಯಲ್ಲಿರುವ ತನ್ನ ಹೈಕಮಿಶನ್ ಗೆ ಸೂಚಿಸಿದೆ.
ಡಿಸೆಂಬರ್ 25ರಂದು ಇಸ್ಲಾಮಾಬಾದ್‌ನಲ್ಲಿರುವ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗುವುದಕ್ಕೆ ಅವರ ತಾಯಿ ಹಾಗೂ ಪತ್ನಿಗೆ ಅನುಮತಿ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿರುವುದನ್ನು ಅನುಸರಿಸಿ ವಿದೇಶಾಂಗ ಸಚಿವಾಲಯ ತನ್ನ ಹೈಕಮಿಶನ್‌ಗೆ ವೀಸಾ ನೀಡಲು ಆದೇಶ ನೀಡಿದೆ.
ಇನ್ನು ಇಸ್ಲಾಮಾಬಾದ್ ಗೆ ತೆರಳುತ್ತಿರುವ ಜಾಧವ್ ಕುಟುಂಬದ ಸಂಪೂರ್ಣ ರಕ್ಷಣೆ ಮತ್ತು ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪಾಕ್ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಜಾಧವ್ ಭೇಟಿ ವೇಳೆ, ಅವರ ಕುಟುಂಬದೊಂದಿಗೆ ಭಾರತೀಯ ಹೈಕಮಿಶನ್‌ನ ಓರ್ವ ಅಧಿಕಾರಿಯೂ ಹಾಜರಿರುವುದಕ್ಕೆ ಅನುಮತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.