ಜೆರುಸಲೇಂ: ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಅಮೆರಿಕ 'ಏಕಾಂಗಿ', ದೊಡ್ಡಣ್ಣನಿಗೆ ಭಾರಿ ಮುಖಭಂಗ

ವಿಶ್ವಸಂಸ್ಥೆ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವದ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೆರಿಕಕ್ಕೆ ಭಾರಿ ಮುಖಭಂಗವಾಗಿದ್ದು, ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾಡುವ ಟ್ರಂಪ್ ಸರ್ಕಾರದ ನಿರ್ಧಾರದ ವಿರುದ್ಧ ಬರೊಬ್ಬರಿ 128 ರಾಷ್ಟ್ರಗಳು ಮತಹಾಕಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಿಶ್ವಸಂಸ್ಥೆ: ವಿಶ್ವಸಂಸ್ಥೆ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವದ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೆರಿಕಕ್ಕೆ ಭಾರಿ ಮುಖಭಂಗವಾಗಿದ್ದು, ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾಡುವ ಟ್ರಂಪ್ ಸರ್ಕಾರದ ನಿರ್ಧಾರದ  ವಿರುದ್ಧ ಬರೊಬ್ಬರಿ 128 ರಾಷ್ಟ್ರಗಳು ಮತಹಾಕಿವೆ.
ಒಟ್ಟು 184 ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ಪೈಕಿ ಅಮೆರಿಕ ನಿರ್ಧಾರದ ವಿರುದ್ಧ ಒಟ್ಟು 128 ರಾಷ್ಟ್ರಗಳು ಮತಹಾಕಿದ್ದು, 35 ರಾಷ್ಟ್ರಗಳು ಯಾವುದೇ ನಿರ್ಧಾರ ಕೈಗೊಳ್ಳದೇ ತಟಸ್ಥ ನಿಲುವು ಪ್ರದರ್ಶನ ಮಾಡಿದವು, ಇನ್ನುಳಿದ 21  ರಾಷ್ಟ್ರಗಳು ವಿಶ್ವಸಂಸ್ಥೆ ಸದನಕ್ಕೇ ಗೈರಾಗುವ ಮೂಲಕ ಪರೋಕ್ಷವಾಗಿ ಅಮೆರಿಕವನ್ನು ಕೈಬಿಟ್ಟಿವೆ. ಆ ಮೂಲಕ ವಿಶ್ವಸಂಸ್ಥೆ ಇತಿಹಾಸದಲ್ಲೇ ಅಮೆರಿಕಕ್ಕೆ ಮೊದಲ ಬಾರಿಗೆ ವಿಶ್ವಸಮುದಾಯದ ಎದುರು ಭಾರಿ ಮುಖಭಂಗವಾಗಿದೆ.
ಅಚ್ಚರಿಯ ವಿಚಾರವೆಂದರೆ ಮತದಾನಕ್ಕೂ ಮುನ್ನ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ತನ್ನ ಮಿತ್ರ ರಾಷ್ಚ್ರಗಳಿಗೆ ತನ್ನ ವಿರುದ್ಧ ಮತಹಾಕದಂತೆ ಪರೋಕ್ಷವಾಗಿ ಎಚ್ಚರಿಕೆ ನೀಡಿತ್ತು. ಒಂದು ವೇಳೆ ತನ್ನ ವಿರುದ್ಧ ಮತ ಹಾಕಿದ್ದೇ  ಆದರೆ ತಾನು ವಿವಿಧ ರಾಷ್ಟ್ರಗಳಿಗೆ ನೀಡುತ್ತಿರುವ ಆರ್ಥಿಕ ನೆರವನ್ನು ಕಡಿತಗೊಳಿಸುವ ಕುರಿತು ಅಮೆರಿಕ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಇದರ ಹೊರತಾಗಿಯೂ 128 ರಾಷ್ಟ್ರಗಳು ಅಮೆರಿಕದ ನಿರ್ಧಾರದ ವಿರುದ್ಧ ಮತ ಹಾಕುವ  ಮೂಲಕ ಅಮೆರಿಕ ನಿರ್ಧಾರ ತಪ್ಪು ಎಂದು ಸಾರಿವೆ.
ಈ  ಹಿಂದೆ ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾಡುವ ಅಮೆರಿಕ ನಿರ್ಧಾರಕ್ಕೆ ಸ್ವತಃ ವಿಶ್ವಸಂಸ್ಥೆಯೇ ವಿರೋಧಿಸಿತ್ತು. ಹೀಗಾಗಿ ಅಮೆರಿಕ ತನ್ನ ವೀಟೋ ಅಧಿಕಾರವನ್ನು ಬಳಕೆ ಮಾಡುವ ಮೂಲಕ ತನ್ನ  ನಿರ್ಧಾರವೇ ಅಂತಿಮ ಎಂದು ಸಾರಲು ಮುಂದಾಗಿತ್ತು. ಆದರೀಗ ವಿಶ್ವ ಸಮುದಾಯವೇ ಅಮೆರಿಕ ನಿರ್ಧಾರದ ವಿರುದ್ಧ ಮತ ಹಾಕುವ ಮೂಲಕ ದೊಡ್ಡಣ್ಣನಿಗೆ ಭಾರಿ ಮುಜುಗರವನ್ನುಂಟು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com