9/11 ದಾಳಿಗೆ ನಿಮ್ಮ ವಿದೇಶಾಂಗ ನೀತಿಯೇ ಕಾರಣ; ಉಗ್ರನಿಂದ ಒಬಾಮಾಗೆ ಪತ್ರ

2001ರಲ್ಲಿ ಅಮೆರಿಕ ಮೇಲೆ ನಡೆದ ಉಗ್ರ ದಾಳಿಗೆ ಅಮೆರಿಕ ಸರ್ಕಾರದ ವಿದೇಶಾಂಗ ನೀತಿಯೇ ಕಾರಣ ಎಂದು 9/11 ದಾಳಿಯ ಮಾಸ್ಟರ್ ಮೈಂಡ್ ಖಾಲಿದ್ ಶೇಖ್ ಮೊಹಮ್ಮದ್ ಹೇಳಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ವಾಷಿಂಗ್ಟನ್: 2001ರಲ್ಲಿ ಅಮೆರಿಕ ಮೇಲೆ ನಡೆದ ಉಗ್ರ ದಾಳಿಗೆ ಅಮೆರಿಕ ಸರ್ಕಾರದ ವಿದೇಶಾಂಗ ನೀತಿಯೇ ಕಾರಣ ಎಂದು 9/11 ದಾಳಿಯ ಮಾಸ್ಟರ್ ಮೈಂಡ್  ಖಾಲಿದ್ ಶೇಖ್ ಮೊಹಮ್ಮದ್ ಹೇಳಿದ್ದಾನೆ.

ಪ್ರಸ್ತುತ 9/11 ದಾಳಿ ಪ್ರಕರಣದಡಿಯಲ್ಲಿ ಬಂಧನಕ್ಕೀಡಾಗಿರುವ ಸೌದಿ ಅರೇಬಿಯಾ ಮೂಲದ ಉಗ್ರ ಖಾಲಿದ್ ಶೇಖ್ ಮೊಹಮ್ಮದ್ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆದಿದ್ದು, 18 ಪುಟಗಳ ಈ ಸುಧೀರ್ಘ ಪತ್ರದಲ್ಲಿ 9/11 ದಾಳಿ ಹಾಗೂ ದಾಳಿಯಲ್ಲಿ ಸಾವನ್ನಪ್ಪಿದ ಅಮಾಯಕರ ಸಾವಿಗೆ ಅಮೆರಿಕ ಸರ್ಕಾರದ ವಿದೇಶಾಂಗ ನೀತಿಯೇ ಕಾರಣ ಎಂಬುದನ್ನು ವಿವರಿಸಿದ್ದಾನೆ. ಅಲ್ಲದೇ ಬರಾಕ್ ಒಬಾಮಾರನ್ನು ಎರಡು ತಲೆಯ ಹಾವು  ಎಂದು ಕರೆದಿರುವ ಖಾಲಿದ್ ಶೇಖ್ ಮೊಹಮ್ಮದ್ ಅಮೆರಿಕವನ್ನು ದಬ್ಬಾಳಿಕೆಯ ದೇಶ ಎಂದು ಜರಿದಿದ್ದಾನೆ.

"9/11ರ ದಾಳಿಯನ್ನು ಆರಂಭಿಸಿದ್ದು ಅಮೆರಿಕದ ಸರ್ವಾಧಿಕಾರಿಗಳೇ ಹೊರತು ನಾವಲ್ಲ. ಮಾರುಕಟ್ಟೆ ಆಧಾರಿತ ಆರ್ಥಿಕತೆಯನ್ನು ಧ್ವಂಸ ಮಾಡಲು ನಮಗೆ ದೇವರು ಬೆಂಬಲ ನೀಡಿದ್ದ. ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ಮಾಡುವಾಗ ಅಲ್ಲಾಹ್ ದಯೆ ನಮ್ಮ ಮೇಲಿತ್ತು. ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯದ ಹೆಸರಿನಲ್ಲಿ ನೀವು ಮಾಡುತ್ತಿರುವ ನಾಟಕವನ್ನು ಈ ಮೂಲಕ ನಾವು ಬಯಲುಗೊಳಿಸಿದ್ದೇವೆ. ಗಾಜಾದಲ್ಲಿ ನಮ್ಮ ಸಹೋದರ/  ಸಹೋದರಿಯರ ರಕ್ತದ ಕೋಡಿ ಹರಿಸಿರುವ ನಿಮ್ಮ ರಕ್ತಸಿಕ್ತ ಕೈಗಳು ಇನ್ನೂ ಆರಿಲ್ಲ. ಇದು ನಿಮ್ಮ ರಕ್ತದಾಹಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಉಗ್ರ ಖಾಲಿದ್ ಶೇಖ್ ಮೊಹಮ್ಮದ್ ಕಿಡಿಕಾರಿದ್ದಾನೆ.

ತನ್ನ ಸುಧೀರ್ಘ ಪತ್ರದಲ್ಲಿ ವಿವಿಧ ಅಂಶಗಳನ್ನು ಪ್ರಸ್ತಾಪಿಸಿರುವ ಉಗ್ರ, ಪ್ರಮುಖವಾಗಿ ಅಮೆರಿಕದ ವಿದೇಶಾಂಗ ನೀತಿ, ವಸಾಹತು ಶಾಹಿ ಹಾಗೂ ವ್ಯಾಪಾರ ಮನೋಭಾವದ ಸ್ನೇಹ, ಇರಾಕ್ ಹಿಂಸಾಚಾರದಲ್ಲಿ ಅಮೆರಿಕದ ಪಾತ್ರ, ಒಸಾಮಾ ಬಿನ್ ಲಾಡೆನ್ ಮತ್ತು ಆತನ ಕಾರ್ಯಾಚರಣೆಗಳ ಕುರಿತಂತೆ ವಿಷಯ ಪ್ರಸ್ತಾಪಿಸಿದ್ದಾನೆ. ಇದೇ ಪತ್ರದಲ್ಲಿ ಜಪಾನ್‌ನ ಹಿರೋಷಿಮಾ ಹಾಗೂ ನಾಗಸಾಕಿ ಮೇಲಿನ ಅಣು ಬಾಂಬ್ ದಾಳಿ, ವಿಯಟ್ನಾ0 ಯುದ್ಧ ಹಾಗೂ ಪ್ಯಾಲಿಸ್ತೇನಿಯನ್ನರ ಮೇಲೆ ಇಸ್ರೇಲ್ ಮಾಡುತ್ತಿರುವ ಯುದ್ಧಕ್ಕೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಅಮೆರಿಕವನ್ನು ಟೀಕಿಸಿದ್ದಾನೆ.

ಅಲ್ಲದೆ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯ ಪತ್ರಕರ್ತ ಡೇನಿಯಲ್ ಪರ್ಲ್‌ನ ಶಿರಚ್ಛೇದವನ್ನು ತಾನೇ ಮಾಡಿದ್ದಾಗಿಯೂ ಮೊಹಮ್ಮದ್ ಹೇಳಿಕೊಂಡಿದ್ದು, ಪಾಕಿಸ್ತಾನದ ಕರಾಚಿಯಲ್ಲಿ ಕರ್ತವ್ಯ ನಿರತನಾಗಿದ್ದ ಡೇನಿಯಲ್  ಪರ್ಲ್‌ರನ್ನು 2002ರಲ್ಲಿ ಅಪಹರಣ ಮಾಡಿ ಹತ್ಯೆಗೈಯ್ಯಲಾಗಿತ್ತು ಎಂದು ಹೇಳಿದ್ದಾನೆ.

ಪ್ರಸ್ತುತ ಗ್ವಾಂಟನಾಮೋ ಕಾರಾಗೃಹದಲ್ಲಿರುವ ಖಾಲಿದ್ ಶೇಖ್ ಮೊಹಮ್ಮದ್  ಈ ಪತ್ರವನ್ನು 2014ರಲ್ಲೇ ಬರೆಯಲು ಆರಂಭಿಸಿದ್ದನಂತೆ. ಜನವರಿ 8, 2015ರಂದು ಬರೆದ ಪತ್ರವನ್ನು ಕಾರಗೃಹದ ಆಡಳಿತ ಮಂಡಳಿ ತಡೆಹಿಡಿದಿದ್ದ  ಕಾರಣ ಈ ಪತ್ರ ಶ್ವೇತಭವನ ತಲುಪಲು ಎರಡು ವರ್ಷಗಳು ಹಿಡಿದಿದ್ದವು ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚೆಗೆ ಮಿಲಿಟರಿ ನ್ಯಾಯಾಧೀಶರೊಬ್ಬರ ಆಜ್ಞೆಯಂತೆ ಈ ಪತ್ರವನ್ನು ದೀರ್ಘಾವಧಿ ಬಳಿಕ ಶ್ವೇತಭವನಕ್ಕೆ  ತಲುಪಿಸಲಾಗಿತ್ತು ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. 3,000 ಜನರನ್ನು ಬಲಿ ತೆಗೆದುಕೊಂಡ 9/11 ದಾಳಿಯ ಸಂಚು ರೂಪಿಸಿದ್ದಕ್ಕೆ ಮೊಹಮ್ಮದ್ ಗಲ್ಲು ಶಿಕ್ಷೆಗೆ ಗುರಿಯಾಗುವ ಸಂಭವವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com