
ಕ್ಯಾಲಿಫೋರ್ನಿಯಾ: ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಕೆನ್ನೆಥ್ ಜೆ ಆ್ಯರೋ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕೆನ್ನೆಥ್ ಅವರು ಮಂಗಳವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಪಾಲೋ ಆಲ್ಟೋ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಕೆನ್ನೆಥ್ ಅವರ ನಿಧನಕ್ಕೆ ಅಮೆರಿಕ ಸರ್ಕಾರದ ಪ್ರತಿನಿಧಿಗಳು, ಖ್ಯಾತ ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು ಹಾಗೂ ಹಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ. ಇಂದು ಕೆನ್ನೆಥ್ ಅವರ ಅಂತಿಮ ವಿಧಾನಗಳು ನೆರವೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇನ್ನು 1972ರಲ್ಲಿ ಬ್ರಿಟೀಷ್ ಅರ್ಥ ಶಾಸ್ತ್ರಜ್ಞ ಸರ್ ಜಾನ್ ಆರ್ ಹಿಕ್ಸ್ ಅವರೊಂದಿಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕೆನ್ನೆಥ್ ಜೆ ಆ್ಯರೋ ಅವರು ಹಂಚಿಕೊಂಡಿದ್ದರು. ಅವರ "ಸಾಮಾನ್ಯ ಆರ್ಥಿಕ ಸಮತೋಲನ ಸಿದ್ದಾಂತ ಮತ್ತು ಜನಕಲ್ಯಾಣ ಸಿದ್ಧಾಂತ ಥಿಯರಿಗೆ ಈ ಪ್ರತಿಷ್ಟಿತ ಪ್ರಶಸ್ತಿ ಲಭಿಸಿತ್ತು. ಈ ಪ್ರಶಸ್ತಿಗೆ ಭಾಜನರಾದಾಗ ಅವರ ವಯಸ್ಸು ಕೇವಲ 45 ವರ್ಷಗಳಲಾಗಿತ್ತು. ಹೀಗಾಗಿ ನೊಬೆಲ್ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಅರ್ಥಶಾಸ್ತ್ರಜ್ಞ ಎಂಬ ಕೀರ್ತಿಗೂ ಕೆನ್ನೆಥ್ ಪಾತ್ರರಾಗಿದ್ದರು.
ಕೆನ್ನೆಥ್ ಅವರು ತಮ್ಮ ಜೀವನ ಬಹುಪಾಲು ಸಮಯವನ್ನು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಳೆದಿದ್ದರು. ಅಲ್ಲದೆ ಪ್ರತಿಷ್ಟಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲೂ 11 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ಐದು ಮಂದಿ ವಿದ್ಯಾರ್ಥಿಗಳು ಇದೇ ಆರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದರು. ಆ ಮೂಲಕ ತಾವೇ ಸ್ವತಃ ನೊಬೆಲ್ ಪ್ರಶಸ್ತಿ ಪಡೆದು ಮತ್ತು ನೊಬೆಲ್ ಪ್ರಶಸ್ತಿ ಪಡೆದ ಐದು ಮಂದಿ ಶಿಷ್ಯರನ್ನು ಪಡೆದ ಕೀರ್ತಿ ಕೂಡ ಕೆನ್ನೆಥ್ ಅವರಿಗೆ ಧಕ್ಕಿತ್ತು.
Advertisement