"ಮುಂದಿನ ನಾಲ್ಕು ವರ್ಷಕ್ಕೂ ನೀವೇ ಅಧ್ಯಕ್ಷರಾಗಿರಿ"; ಒಬಾಮಾ ವಿದಾಯದ ಭಾಷಣದ ವೇಳೆ ಜನರ ಕೂಗು

ಅಮೆರಿಕದ ಕಾನೂನು ಮೀರಿ ಮುಂದಿನ ನಾಲ್ಕು ವರ್ಷಕ್ಕೆ ನಾನೇ ಮತ್ತೆ ಅಧ್ಯಕ್ಷನಾಗಿರಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ವಿದಾಯ ಭಾಷಣ ಮಾಡಿದ ಬರಾಕ್ ಒಬಾಮ
ವಿದಾಯ ಭಾಷಣ ಮಾಡಿದ ಬರಾಕ್ ಒಬಾಮ

ಚಿಕಾಗೋ: ಅಮೆರಿಕದ ಕಾನೂನು ಮೀರಿ ಮುಂದಿನ ನಾಲ್ಕು ವರ್ಷಕ್ಕೆ ನಾನೇ ಮತ್ತೆ ಅಧ್ಯಕ್ಷನಾಗಿರಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

ಚಿಕಾಗೋದಲ್ಲಿ ನಡೆದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವಿದಾಯದ ಭಾಷಣ ಹಲವು ಭಾವನಾತ್ಮಕ ಅಂಶಗಳಿಗೆ ಸಾಕ್ಷಿಯಾಗಿತ್ತು. ಒಬಾಮ ತಮ್ಮ ವಿದಾಯದ ಭಾಷಣ ಮಾಡುತ್ತಿರುವಂತೆಯೇ ಅಲ್ಲಿ ನೆರೆದಿದ್ದ ಲಕ್ಷಾಂತರ  ಪ್ರಜೆಗಳು, ಮುಂದಿನ ನಾಲ್ಕು ವರ್ಷಕ್ಕೂ ನೀವೇ ನಮ್ಮ ಅಧ್ಯಕ್ಷರಾಗಿರಿ ಎಂದು ಕೂಗಲಾರಂಭಿಸಿದರು. ಇದನ್ನು ಕೇಳಿದ ಒಬಾಮ ಒಮ್ಮೆ ಮುಗುಳ್ನಗೆ ಬೀರಿ ಅದು ನನ್ನಿಂದ ಸಾಧ್ಯವಿಲ್ಲ. ಎಲ್ಲಕ್ಕಿಂತ ದೇಶದ ಕಾನೂನು ಮುಖ್ಯ. ನಿಮ್ಮ  ಪ್ರೀತಿಗೆ ನಾನು ಅಭಾರಿ ಎಂದು ಹೇಳಿದರು.

ಭಾಷಣದ ನಡುವೆ ಕೆಲ ವಿಚಾರಗಳನ್ನು ನೆನೆಯುತ್ತ ಗದ್ಗದಿತರಾದ ಒಬಾಮ, ಕಳೆದೊಂದು ವಾರದಿಂದ ನೀವು ನನ್ನ ಮತ್ತು ಮಿಶೆಲ್ ಮೇಲೆ ತೋರಿಸುತ್ತಿರುವ ಪ್ರೀತಿ ನಿಜಕ್ಕೂ ಅವಿಸ್ಮರಣೀಯವಾಗಿದೆ. ನಿಮಗೆ ಸೇವೆ ಸಲ್ಲಿಸುವ  ಅವಕಾಶ ನೀಡಿದ್ದಕ್ಕಾಗಿ ಪ್ರತಿಯೊಬ್ಬ ಅಮೆರಿಕ ಪ್ರಜೆಗೂ ನಾನು ಧನ್ಯವಾದ ಹೇಳುತ್ತೇನೆ. ಇದು ನನಗೆ ಸಿಕ್ಕ ಅತ್ಯಂತ ದೊಡ್ಡ ಗೌರವ ಎಂದು ನಾನು ಭಾವಿಸುತ್ತೇನೆ. ಅಮೆರಿಕದ ಇಂದಿನ ಸ್ಥಿತಿಗೆ ಪ್ರತಿಯೊಬ್ಬ ಪ್ರಜೆಯ  ಪರಿಶ್ರಮವಿದೆ. ಇದಕ್ಕಾಗಿ ನಾನು ನಿಮಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದು ಒಬಾಮ ಗದ್ಗದಿತರಾದರು.

ಇದೇ ವೇಳೆ ಅಮೆರಿಕ ಉಪಾಧ್ಯಕ್ಷ ಜೋ ಬಿಡೆನ್ ಅವರ ಬಗ್ಗೆ ಮಾತನಾಡಿದ ಒಬಾಮ, ನಾನು ಅಧ್ಯಕ್ಷನಾದ ಬಳಿಕ ನನ್ನ ಮೊದಲ ಆಯ್ಕೆಯೇ ಜೋ ಬಿಡೆನ್ ಆಗಿತ್ತು. ಅಮೆರಿಕ ಉಪಾಧ್ಯಕ್ಷರಾಗಿ ಮಾತ್ರವಲ್ಲ ಬಿಡೆನ್ ನನ್ನ ಅತ್ಯುತ್ತಮ  ಸ್ನೇಹಿತ ಮತ್ತು ನನ್ನ ಸಹೋದರ ಎಂದು ಹೇಳಲು ಇಷ್ಟ ಪಡುತ್ತೇನೆ. ಕಳೆದ 25 ವರ್ಷಗಳಿಂದ ಮಿಶೆಲ್ ನನ್ನ ಪತ್ನಿ ಮತ್ತು ನನ್ನ ಮಕ್ಕಳ ತಾಯಿಯಾಗದಿ ಮಾತ್ರವಿರದೇ ನನ್ನ ಸ್ನೇಹಿತೆಯಾಗಿದ್ದರು. ನನ್ನ ಏಳು ಬೀಳುಗಳಲ್ಲಿ  ಜೊತೆಯಾಗಿದ್ದರು ಎಂದು ಒಬಾಮ ಹೇಳಿದರು.

ಅತ್ಯುತ್ತಮ ಮೌಲ್ಯಗಳ ದೇಶ ಅಮೆರಿಕ
ಅಮೆರಿಕ ಅತ್ಯುತ್ತಮ ಮೌಲ್ಯಗಳ ದೇಶವಾಗಿದ್ದು, ಇದೇ ಕಾರಣಕ್ಕಾಗಿ ನಾನು ಮುಸ್ಲಿಮರ ವಿರುದ್ಧದ ಪಕ್ಷಪಾತ ಧೋರಣೆಯನ್ನು ತಿರಸ್ಕರಿಸಿದ್ದೆ. ಪಕ್ಷಪಾತ ಧೋರಣೆ ನಮ್ಮ ಪ್ರಜಾಪ್ರಭುತ್ವಕ್ಕೆ ದೊಡ್ಡ ಬೆದರಿಕೆಯಾಗಿದೆ.  ಭಯೋತ್ಪಾದನೆ ಜಾಗತಿಕ ಪಿಡುಗಾಗಿದೆ. ಆದರೆ ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ. ಮುಸ್ಲಿಮರಲ್ಲೂ ದೇಶಪ್ರೇಮಿಗಳಿದ್ದಾರೆ. ನಾವು ಯಾವಾಗ ಪ್ರಜಾಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುತ್ತೇವೆಯೋ ಆಗ  ಪ್ರಜಾಪ್ರಭುತ್ವವಕ್ಕೆ ದೊಡ್ಡ ಬೆದರಿಕೆ ಎದುರಾಗುತ್ತದೆ. ಇಸಿಸ್ ನಂತಹ ದೊಡ್ಡ ಉಗ್ರಗಾಮಿ ಸಂಘಟನೆಯನ್ನೂ ಕೂಡ ನಾವು ನಿಯಂತ್ರಿಸುವಲ್ಲಿ ಯಶಸ್ಸು ಸಾಧಿಸಿದ್ದು, ಅವರ ಪ್ರಭುತ್ವವಿದ್ದ ಅರ್ಧದಷ್ಟು ಪ್ರದೇಶದಲ್ಲಿ ಶಾಂತಿ  ಸ್ಥಾಪನೆಗೆ ಯತ್ನಿಸಿದ್ದೇವೆ ಎಂದು ಒಬಾಮ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com