ಭಯೋತ್ಪಾದನೆ ನಿಗ್ರಹ, ವ್ಯಾಪಾರ ಮತ್ತು ಹೂಡಿಕೆ ಚರ್ಚೆ ಮೇಲೆ ಭಾರತದ ಪ್ರಭಾವ ಮಹತ್ವದ್ದು: ಅರವಿಂದ್ ಪನಗಾರಿಯಾ

ಜಿ20 ಶೃಂಗಸಭೆಯಲ್ಲಿ ಭಯೋತ್ಪಾದನೆ ನಿಗ್ರಹ, ವ್ಯಾಪಾರ ಮತ್ತು ಹೂಡಿಕೆ ವಿಷಯಗಳ ಚರ್ಚೆ ಮೇಲೆ...
ಅರವಿಂದ್ ಪನಗಾರಿಯಾ
ಅರವಿಂದ್ ಪನಗಾರಿಯಾ
ಹ್ಯಾಂಬರ್ಗ್(ಜರ್ಮನಿ): ಜಿ20 ಶೃಂಗಸಭೆಯಲ್ಲಿ ಭಯೋತ್ಪಾದನೆ ನಿಗ್ರಹ, ವ್ಯಾಪಾರ ಮತ್ತು ಹೂಡಿಕೆ ವಿಷಯಗಳ ಚರ್ಚೆ ಮೇಲೆ ಭಾರತ ಭಾರೀ ಪ್ರಭಾವ ಬೀರಿದೆ ಎಂದು ತಜ್ಞ, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಹೇಳಿದ್ದಾರೆ.
ಜಿ20 ಶೃಂಗಸಭೆಯ ಮುಕ್ತಾಯದ ದಿನವಾದ ನಿನ್ನೆ ಮಾತನಾಡಿದ ಅವರು, ಭಯೋತ್ಪಾದನೆ ನಿಗ್ರಹಕ್ಕೆ ಜಂಟಿ ಹೇಳಿಕೆಗೆ ಅನುಬಂಧ ಹಾಕುವ ಯೋಜನೆಯಿತ್ತು.  ಆದರೆ ತನ್ನ ಹಿತಾಸಕ್ತಿಯನ್ನು ಬಲಿಕೊಟ್ಟು ಬೇರೆ ದೇಶಗಳ ಪ್ರಸ್ತಾವವನ್ನು  ಒಪ್ಪಿಕೊಳ್ಳಲು ಭಾರತ ಸಿದ್ಧವಿರಲಿಲ್ಲ ಎಂದರು.
ಭಯೋತ್ಪಾದನೆ, ವ್ಯಾಪಾರ, ಹೂಡಿಕೆ ಮೊದಲಾದ ವಿಷಯಗಳ ಕುರಿತು ನಡೆದ ಚರ್ಚೆಗಳು ಸೌಹಾರ್ದಯುತವಾಗಿತ್ತು.ಅಲ್ಲಿ ಎಲ್ಲ ದೇಶಗಳು ಅತ್ಯಂತ ಆತ್ಮೀಯವಾಗಿದ್ದವು. ಆದರೆ ರಾಷ್ಟ್ರದ ಹಿತಾಸಕ್ತಿಯನ್ನು ಬಲಿಕೊಡುವುದು ನಮ್ಮ ನಾಯಕರಿಗೆ ಬೇಕಾಗಿರಲಿಲ್ಲ ಎಂದು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇಂಗಾಲದ ಡೈ ಆಕ್ಸೈಡ್ ತಗ್ಗಿಸುವ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಅಮೆರಿಕ ಹೊರತುಪಡಿಸಿ ಮಿಕ್ಕ 19 ಜಿ20 ಗುಂಪಿನ ದೇಶಗಳು ಬದ್ಧತೆ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಪನಗಾರಿಯಾ, ಇಲ್ಲಿ ಭಿನ್ನಾಭಿಪ್ರಾಯವಿದ್ದರೂ ಕೂಡ ಯಾರೊಬ್ಬರು ಪ್ರತ್ಯೇಕಿಸಲ್ಪಟ್ಟಿದ್ದಾರೆ ಎಂಬುದಲ್ಲ. ಯುರೋಪಿಯನ್ನರು ಈ ವಿಷಯದಲ್ಲಿ ಬಲವಾದ ಸ್ಥಾನದಲ್ಲಿದ್ದಾರೆ.
ಪ್ಯಾರಿಸ್ ಒಪ್ಪಂದವನ್ನು ಕಾಯ್ದುಕೊಂಡಿರುವ ಭಾರತಕ್ಕೆ ಇದರಲ್ಲಿ ಬೆಳವಣಿಗೆ ಕಾಣಲು ಕೆಲ ಸಮಯಗಳು ಬೇಕಾಗುತ್ತದೆ. ಸಂಪೂರ್ಣವಾಗಿ ಶುದ್ಧ ಇಂಧನದ ಪ್ರಗತಿ ಕಾಣಲು ಸಾಕಷ್ಟು ಸಮಯ ಬೇಕಾಗಬಹುದು ಎಂದರು.
ಅಂತರರಾಷ್ಟ್ರೀಯ ಹಣಕಾಸು ವಿಚಾರದಲ್ಲಿ ವಿಶ್ವದ ನಾಯಕರು ಅಗತ್ಯ ಕೋಟಾ ಸುಧಾರಣೆಗಳನ್ನು ಮಾಡಲು ಮತ್ತು ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಭಾರತ ದೃಢ ಸಂಕಲ್ಪ ಮಾಡಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತಪನ್ ರೇ ಹೇಳಿದ್ದಾರೆ.
ಜಿ20 ಶೃಂಗಸಭೆಯಲ್ಲಿ ಹಣಕಾಸು ವಿಚಾರದಲ್ಲಿ ಅಂತಾರಾಷ್ಟ್ರೀಯ ಸಹಕಾರ ವಿಷಯಕ್ಕೆ ಸಂಬಂಧಪಟ್ಟಂತೆ ಬಲವಾದ ಬೆಂಬಲ ಸಿಕ್ಕಿದ್ದು ಭಾರತ ಈ ಕಾರ್ಯಸೂಚಿಯಲ್ಲಿ ಬಲವಾದ ರೀತಿಯಲ್ಲಿ ಕೊಡುಗೆ ನೀಡಿದೆ ಎಂದು ರೇ ಹೇಳಿದ್ದಾರೆ.
ಹವಾಮಾನ ಬದಲಾವಣೆ, ವ್ಯಾಪಾರ, ಹೂಡಿಕೆ ಮತ್ತು ವಲಸೆಗೆ ಸಂಬಂಧಪಟ್ಟಂತೆ ಶೃಂಗಸಭೆಯಲ್ಲಿ ವಿಶ್ವ ನಾಯಕರ ಮಧ್ಯೆ ಸಾಕಷ್ಟು ಸಂಧಾನಗಳು ಏರ್ಪಟ್ಟವು ಎಂದು ಪನಗರಿಯಾ ಹೇಳಿದರು.
ಜಾಗತಿಕ ಅಭಿವೃದ್ಧಿ ಮತ್ತು ಸಮುದಾಯದ ರಚನಾತ್ಮಕ ಸುಧಾರಣೆಗಳು, ಅಂತರ್ಗತ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಮಹತ್ವ ನೀಡುವ ಮಾತುಕತೆಗಳು ನಡೆದವು. ಅಂತರಾಷ್ಟ್ರೀಯ ಹಣಕಾಸು ನಿಧಿಯ ಕೋಟಾ ಸುಧಾರಣೆ ಜಾರಿ ಮತ್ತು 2019ರ ವೇಳೆಗೆ ಹೊಸ ಕೋಟಾ ನೀತಿ ಜಾರಿ, ತೆರಿಗೆ ಮತ್ತು ಹಣಕಾಸು ಸುಧಾರಣೆ ಸಂಬಂಧ ಅಂತಾರಾಷ್ಟ್ರೀಯ ಸಹಕಾರವನ್ನು ಜಿ20 ನಾಯಕರು ಒಪ್ಪಿಕೊಂಡಿದ್ದಾರೆ ಎಂದು ತಪನ್ ರೇ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com