ಜನರಲ್ ಪರ್ವೇಜ್ ಮುಷರಫ್
ವಿದೇಶ
2001ರಲ್ಲಿ ಭಾರತದ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಲು ಚಿಂತಿಸಿದ್ದ ಮುಷರಫ್ ಗೆ ಕಾಡಿದ್ದು ಪ್ರತೀಕಾರದ ಭಯ!
2001 ರಲ್ಲಿ ಭಾರತದ ಸಂಸತ್ ಮೇಲೆ ಭಯೋತ್ಪಾದಕರ ದಾಳಿ ನಡೆದು ಭಾರತ-ಪಾಕಿಸ್ತಾನದ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದ ವೇಳೆ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಪಾಕಿಸ್ತಾನದ...
ದುಬೈ: 2001 ರಲ್ಲಿ ಭಾರತದ ಸಂಸತ್ ಮೇಲೆ ಭಯೋತ್ಪಾದಕರ ದಾಳಿ ನಡೆದು ಭಾರತ-ಪಾಕಿಸ್ತಾನದ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದ ವೇಳೆ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಪಾಕಿಸ್ತಾನದ ಅಂದಿನ ಸರ್ವಾಧಿಕಾರಿ ಜನರಲ್ ಪರ್ವೇಜ್ ಮುಷರಫ್ ಚಿಂತಿಸಿದ್ದರು, ಆದರೆ ಪ್ರತೀಕಾರದ ಭಯದಿಂದ ಹಿಂಜರಿದಿದ್ದರು ಎಂದು ತಿಳಿದುಬಂದಿದೆ.
ಜಪಾನ್ ನ ಪತ್ರಿಕೆಯೊಂದು ಈ ಬಗ್ಗೆ ಹೇಳಿದ್ದು, ಭಾರತದ ಮೇಲೆ ದಾಳಿ ನಡೆಸುವ ನಿಟ್ಟಿನಲ್ಲಿ ಅಣ್ವಸ್ತ್ರಗಳನ್ನು ಸಜ್ಜುಗೊಳಿಸುವುದರ ಸಂಬಂಧ ಚಿಂತಿಸುತ್ತಿದ್ದ ಮುಷರಫ್ ನಿದ್ದೆ ಇಲ್ಲದೇ ಹಲವು ರಾತ್ರಿಗಳನ್ನು ಕಳೆದಿದ್ದರು ಎಂದಿದೆ. 2001 ರಲ್ಲಿ ಭಾರತದ ಸಂಸತ್ ಮೇಲೆ ದಾಳಿ ನಡೆದಾಗ ಭಾರತ-ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಮೂಡಿತ್ತು, ಇದರ ಹೊರತಾಗಿಯೂ ಪರ್ವೇಜ್ ಮುಷರಫ್ ಅಣ್ವಸ್ತ್ರ ದಾಳಿ ನಡೆಸುವ ಬಗ್ಗೆ ಯೋಜಿಸಿದ್ದರು ಅಷ್ಟೇ ಅಲ್ಲದೇ ಅಣ್ವಸ್ತ್ರ ಬಳಕೆ ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಮುಷರಫ್ ಸಾರ್ವಜನಿಕವಾಗಿಯೂ ಹೇಳಿದ್ದರು.
ಅಂದಿನ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳ ಕ್ಷಿಪಣಿಗಳಲ್ಲಿ ಅಣ್ವಸ್ತ್ರ ಸಿಡಿತಲೆಗಳು ಸಿದ್ಧವಾಗಿರಲಿಲ್ಲವಾದ್ದರಿಂದ ಅವುಗಳನ್ನು ಪ್ರಯೋಗಕ್ಕೆ ಸಿದ್ಧಗೊಳಿಸಬೇಕಾದರೆ ಒಂದೆರಡು ದಿನಗಳು ಬೇಕಾಗುತ್ತಿತ್ತು ಎಂದು ಪತ್ರಿಕೆ ವಿಶ್ಲೇಷಿಸಿದೆ.
ಅಣ್ವಸ್ತ್ರ ಸಿಡಿತಲೆಗಳನ್ನು ಪ್ರಯೋಗಕ್ಕೆ ಅಣಿಗೊಳಿಸುವಂತೆ ಸೂಚಿಸಿದ್ದರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಮುಷರಫ್ ನಾವು ಆ ಕೆಲಸಕ್ಕೆ ಕೈಹಾಕಲಿಲ್ಲ, ಭಾರತವೂ ಹಾಗೆ ಮಾಡಿರಲಿಲ್ಲ ಎಂದು ಅಂದುಕೊಳ್ಳುತ್ತೇವೆ ದೇವರಿಗೆ ಧನ್ಯವಾದಗಳು (Thank God) ಎಂಬ ಪ್ರತಿಕ್ರಿಯೆ ನೀಡಿದ್ದು, ಪ್ರತೀಕಾರದ ಭಯದಿಂದ ಮುಷರಫ್ ತಮ್ಮ ಚಿಂತನೆಯಿಂದ ಹಿಂಜರಿದಿದ್ದರು ಎಂದು ವಿಶ್ಲೇಷಿಸಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ