ಪನಾಮಾ ಪ್ರಕರಣ: ನವಾಜ್ ಷರೀಫ್ ದೋಷಿ; ಪ್ರಧಾನಿ ಹುದ್ದೆಯಿಂದ ಅನರ್ಹ; ರಾಜೀನಾಮೆ!

ವಿಶ್ವದಾದ್ಯಂತ ಬಾರಿ ಸುದ್ದಿಗೆ ಗ್ರಾಸವಾಗಿದ್ದ ಪನಾಮಾ ಪೇಪರ್ಸ್ ಹಗರಣ ಸಂಬಂಧ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು...
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್

ಇಸ್ಲಾಮಾಬಾದ್: ವಿಶ್ವದಾದ್ಯಂತ ಬಾರಿ ಸುದ್ದಿಗೆ ಗ್ರಾಸವಾಗಿದ್ದ ಪನಾಮಾ ಪೇಪರ್ಸ್ ಹಗರಣ ಸಂಬಂಧ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ದೋಷಿ ಎಂದು ತೀರ್ಮಾನಿಸಿರುವ ಕೋರ್ಟ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿದೆ.

ಪನಾಮಾ ಹಗರಣ ಸಂಬಂಧ ಪಂಚ ನ್ಯಾಯಾಧೀಶ ಪೀಠ ಇಂದು ತೀರ್ಪನ್ನು ಪ್ರಕಟಿಸಿದ್ದು, ಪ್ರಧಾನಮಂತ್ರಿ ಹುದ್ದೆಯಿಂದ ಷರೀಫ್ ಅವರನ್ನು ಅನರ್ಹಗೊಳಿಸಿದೆ. ಅಲ್ಲದೆ, ಷರೀಫ್ ಕುಟುಂಬದ ವಿರುದ್ಧ 6 ವಾರಗಳೊಳಗಾಗಿ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಎನ್ಎಬಿಗೆ ಆದೇಶಿಸಿದೆ. 

ಇದರೊಂದಿಗೆ ಪಾಕ್ ಹಣಕಾಸು ಸಚಿವ ಇಶಾಕ್ ದಾರ್ ಮತ್ತು ಷರೀಫ್ ಅವರ ಅಳಿಯ ಹಾಗೂ ಪಾಕಿಸ್ತಾನದ ರಾಷ್ಟ್ರೀಯ ವಿಧಾನಸಭಾ ಸದಸ್ಯರಾಗಿರುವ ಮುಹಮ್ಮದ್ ಸಫ್ದಾರ್ ಅವರನ್ನೂ ಸ್ಥಾನದಿಂದ ಅನರ್ಹಗೊಳಿಸಿದೆ. 
ತೀರ್ಪು ಪ್ರಕಟಣೆ ವೇಳೆ ಸುಪ್ರೀಂಕೋರ್ಟ್'ನ ಪಂಚ ನ್ಯಾಯಾಧೀಶ ಪೀಠದಲ್ಲಿ ಒಬ್ಬರಾಗಿರುವ ಇಜಾಜ್ ಅಫ್ಜಲ್ ಖಾನ್ ಅವರು ಷರೀಫ್ ವಿರುದ್ಧ ಕೆಂಡಾಮಂಡಲಗೊಂಡಿದ್ದು, ಷರೀಫ್ ಅವರು ಸಂಸತ್ತಿನ ಪ್ರಾಮಾಣಿಕ ಸದಸ್ಯರಾಗುವ ಅರ್ಹತೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. 

ಷರಾಫ್ ಕುಟುಂಬ ಲಂಡನ್ ನಲ್ಲಿ 2 ಬೇನಾಮಿ ಆಸ್ತಿ ಹೊಂದಿದ್ದು, ಪನಾಮಾ ಪೇಪರ್ಸ್ ಸೋರಿಕೆ ಮೂಲಕ ಈ ಸತ್ಯ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆಗೆ ನೇಮಕಗೊಂಡಿದ್ದ ಸುಪ್ರೀಂಕೋರ್ಟ್ ಸಮಿತಿಯು ಷರೀಫ್ ಬೇನಾಮಿ ಆಸ್ತಿ ಹೊಂದಿದ್ದು ನಿಜ ಎಂದು ಜುಲೈ.10ರಂದು ವರದಿ ನೀಡಿತ್ತು. ಆದರೆ, ವರದಿಯನ್ನು ಷರೀಫ್ ನಿರಾಕರಿಸಿದ್ದರು. 

ಇದೀಗ ಪ್ರಕರಣದಲ್ಲಿ ಷರೀಫ್ ಮತ್ತು ಅವರ ಕುಟುಂಬ ದೋಷಿ ಎಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ್ದು, ತೀರ್ಪು ಹಿನ್ನಲೆಯಲ್ಲಿ ಷರೀಫ್ ಅವರು ಪ್ರಧಾನಿಯಾಗಿ ಮುಂದುವರೆಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಹಿನ್ನಲೆಯಲ್ಲಿ ಪ್ರಧಾನಿ ಹುದ್ದೆ ತ್ಯಜಿಸಿದ ನವಾಜ್ ಷರೀಫ್
ಅತ್ತ ಪಾಕಿಸ್ತಾನ ಸುಪ್ರೀಂಕೋರ್ಟ್ ತಮ್ಮ ವಿರುದ್ಧ ತೀರ್ಪು ನೀಡಿದ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದು, ಪದತ್ಯಾಗ ಮಾಡಿರುವ ನವಾಜ್ ಷರೀಫ್ ತಮ್ಮ ಮುಂದಿನ ನಡೆ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ಸುದ್ದಿ ಬಿತ್ತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com