ಬ್ರಿಟನ್ ಸಂಸತ್ ಚುನಾವಣೆ: ಪ್ರಧಾನಿ ಥೆರೇಸಾ ಮೇಗೆ ತೀವ್ರ ಹಿನ್ನಡೆ!

ಬ್ರಿಟನ್ ನಲ್ಲಿ ನಡೆಯುತ್ತಿರುವ ಸಂಸತ್ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಥೆರೇಸಾ ಮೇ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಥೆರೇಸಾ ಮೇ ಅವರು ಬಹುಮತ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಬ್ರಿಟನ್ ನಲ್ಲಿ ನಡೆಯುತ್ತಿರುವ ಸಂಸತ್ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಥೆರೇಸಾ ಮೇ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಥೆರೇಸಾ ಮೇ ಅವರು ಬಹುಮತ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿವೆ.

ಬ್ರಿಟನ್ ಸಂಸತ್ ನ 650 ವೆಸ್ಟ್‌ಮಿನಿಸ್ಟರ್ ಸಂಸದರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಮತ ಎಣಿಕೆ ಪ್ರಗತಿಯಲ್ಲಿದೆ. ಇತ್ತೀಚಿನ ವರದಿಗಳ ಪ್ರಕಾರ, ಕನ್ಸರ್ವೇಟಿವ್ ಪಕ್ಷ 256 ಹಾಗೂ ಲೇಬರ್ ಪಕ್ಷ 231 ಸ್ಥಾನಗಳಲ್ಲಿ ಜಯ  ಸಾಧಿಸಿವೆ. ಎಸ್‌ಎನ್‌ಪಿ 32 ಸ್ಥಾನ ಪಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು ನಿಖರವಾಗಿದ್ದೇ ಆದರೆ, ಕನ್ಸರ್ವೇಟಿವ್ ಪಕ್ಷಕ್ಕೆ ಮತ್ತು ಪ್ರಧಾನಿ ಥೆರೇಸಾ ಮೇ ಅವರಿಗೆ ಇದೊಂದು ಆಘಾತಕಾರಿ ಫಲಿತಾಂಶ ಎಂದು ಬ್ರಿಟನ್‌ನ  ಮಾಜಿ ಹಣಕಾಸು ಸಚಿವ ಜಾರ್ಜ್ ಒಸ್‌ಬ್ರೋನ್ ಪ್ರತಿಕ್ರಿಯಿಸಿದ್ದಾರೆ.

ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವ ಸಾಧ್ಯತೆ ಇಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜು ಮಾಡಿದ್ದು, ಈ ಮಧ್ಯೆ ಲಿಬರಲ್ ಡೆಮೋಕ್ರೆಟಿಕ್ ಪಕ್ಷ ಯಾವುದೇ ಪಕ್ಷಗಳ ಜತೆ ಒಪ್ಪಂದ ಅಥವಾ ಮೈತ್ರಿ  ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದೂ ಸ್ಪಷ್ಟಪಡಿಸಿದೆ.

ಉಳಿದಂತೆ ಮಾಜಿ ಸ್ಕಾಟಿಷ್ ರಾಷ್ಟೀಯವಾದಿ ಮುಖಂಡ ಅಲೆಕ್ಸ್ ಸಾಲ್ಮಂಡ್ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದು, ಚುನಾವಣೆಯಲ್ಲಿ ಥೆರೇಸಾ ಮೇ ಪಕ್ಷ ಹಿನ್ನಲೆ ಕಂಡಿರುವ ಹಿನ್ನಲೆಯಲ್ಲಿ ಲೇಬರ್ ಪಕ್ಷದ ಮುಖಂಡ ಜೆರೆಮಿ  ಕಾರ್ಬಿನ್ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

ಗುರುವಾರ ಪ್ರಕಟವಾಗಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ ಥೆರೇಸಾ ಮೇ ಅವರ ಪಕ್ಷ 330ರಿಂದ 314 ಸ್ಥಾನಗಳಿಗೆ ಕುಸಿಯಬಹುದು ಎಂದು ಹೇಳಿತ್ತು. ಅಂತೆಯೇ ವಿಪಕ್ಷ ಲೇಬರ್ ಪಾರ್ಟಿ ತನ್ನ ಸೀಟುಗಳ ಗಳಿಕೆಯನ್ನು 229ರಿಂದ  266ಕ್ಕೆ ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಲಾಗಿತ್ತು. ಇದೀಗ ಸಮೀಕ್ಷೆಗಳ ವರದಿ ನಿಜವಾಗುತ್ತಿದ್ದು, ಅವಧಿಗೂ ಮೊದಲೇ ಚುನಾವಣೆ ನಡೆಸಿದ ಥೆರೇಸಾ ಮೇ ಅವರ ನಿರ್ಧಾರ ಇದೀಗ ಅವರಿಗೇ ತಿರುಗೇಟ್ ಆಗಿ ಪರಿಣಮಿಸಿದೆ.  ಅಂತೆಯೇ ಅವರ ರಾಜಿನಾಮೆಗೂ ಕೂಡ ಒತ್ತಡ ಹೆಚ್ಚಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com