ಥೆರೆಸಾ "MAY" ಕ್ವಿಟ್: ಬ್ರಿಟನ್ ಸಂಸತ್ ಅತಂತ್ರ, ತಿರುಗುಬಾಣವಾದ ಚುನಾವಣಾ ತಂತ್ರ

ಬ್ರಿಟನ್ ನಲ್ಲಿ ನಡೆದ ದಿಢೀರ್ ಚುನಾವಣೆ ಪ್ರಧಾನಿ ಥೆರೇಸಾ ಮೇ ಹಾಗೂ ಆಡಳಿತಾ ರೂಢ ಕನ್ಸರ್ವೇಟಿವ್‌ ಪಕ್ಷಕ್ಕೆ ತಿರುಗು ಬಾಣವಾಗಿ ಪರಿಣಮಿಸಿದ್ದು, ಚುನಾವಣೆಯಲ್ಲಿ ಥೆರೆಸಾ ಮೇ ಸರ್ಕಾರ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಬ್ರಿಟನ್ ನಲ್ಲಿ ನಡೆದ ದಿಢೀರ್ ಚುನಾವಣೆ ಪ್ರಧಾನಿ ಥೆರೇಸಾ ಮೇ ಹಾಗೂ ಆಡಳಿತಾ ರೂಢ ಕನ್ಸರ್ವೇಟಿವ್‌ ಪಕ್ಷಕ್ಕೆ ತಿರುಗು ಬಾಣವಾಗಿ ಪರಿಣಮಿಸಿದ್ದು, ಚುನಾವಣೆಯಲ್ಲಿ ಥೆರೆಸಾ ಮೇ ಸರ್ಕಾರ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

ಆಡಳಿತಾ ರೂಢ ಕನ್ಸರ್ವೇಟಿವ್‌ ಪಕ್ಷ ಮತ್ತು ವಿಪಕ್ಷ ಲೇಬರ್ ಪಕ್ಷ ಸೇರಿದಂತೆ ಯಾವುದೇ ಪಕ್ಷವೂ ಕೂಡ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಪರಿಣಾಮ ಬ್ರಿಟನ್ ಸಂಸತ್ ಇದೀಗ ತ್ರಿಶಂಕು ಸ್ಥಿತಿಗೆ ತಲುಪಿದ್ದು, 3 ವರ್ಷಗಳ  ಮೊದಲೇ ನಡೆದ ಚುನಾವಣಾ ನಿಜಕ್ಕೂ ಪ್ರಧಾನಿ ಥೆರೆಸಾ ಮೇ ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ. 650 ಸದಸ್ಯ ಬಲದ ಬ್ರಿಟಿಷ್‌ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಈವರೆಗೂ 647 ಸ್ಥಾನಗಳ ಫ‌ಲಿತಾಂಶ  ಬಹಿರಂಗವಾಗಿದೆ. ಅದರಂತೆ ಆಡಳಿತಾ ರೂಢ ಕನ್ಸರ್ವೇಟಿವ್ ಪಕ್ಷ 316 ಸ್ಥಾನಗಳನ್ನು ಪಡೆದಿದ್ದು, ವಿಪಕ್ಷ ಲೇಬರ್ ಪಾರ್ಟಿ 261 ಸ್ಥಾನಗಳನ್ನು ಪಡೆದುಕೊಂಡಿದೆ.

ಇದೇ ವೇಳೆ ಸ್ಕಾಟ್ಲೆಂಡ್‌ ನ‌ಲ್ಲಿ ಸ್ಕಾಟಿಶ್‌ ನ್ಯಾಶನಲಿಸ್ಟ್‌ ಪಾರ್ಟಿ ಭಾರೀ ಹಿನ್ನಡೆ ಅನುಭವಿಸಿದ್ದು,  2015ರಲ್ಲಿ ಇದು ಸ್ಕಾಟ್ಲಂಡ್‌ ನ‌ 59ರಲ್ಲಿ 56 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಆದರ ಗಳಿಕೆ ಕೇವಲ 22ಕ್ಕೆ ಕುಸಿದಿದೆ ಎಂದು  ತಿಳಿದುಬಂದಿದೆ. ಎಸ್ ಎನ್ ಪಿ ಪಕ್ಷದ ಸ್ಥಾನಗಳು ಕನ್ಸರ್ವೇಟಿವ್‌, ಲೇಬರ್‌ ಮತ್ತು ಲಿಬರಲ್‌ ಡೆಮೊಕ್ರಾಟ್ಸ್‌ಗಳಲ್ಲಿ ಹಂಚಿಹೋಗಿದೆ ಎಂದು ಹೇಳಲಾಗುತ್ತಿದೆ.

ಬ್ರೆಕ್ಸಿಟ್ ಮತದಾನದ ಬಳಿಕ ನಡೆದ ಚುನಾವಣೆಯಲ್ಲಿ 326 ಸ್ಥಾನಗಳೊಂದಿಗೆ ಭಾರಿ ಬಹುಮತ ಸಾಧಿಸಿದ್ದ ಕನ್ಸರ್ವೇಟಿವ್ ಪಕ್ಷಕ್ಕೆ ಹಾಲಿ ಚುನಾವಣೆ ನಿಜಕ್ಕೂ ಆಘಾತಕಾರಿ ಫಲಿತಾಂಶ ನೀಡಿದೆ. ಪ್ರಸ್ತುತ ಚುನಾವಣೆ ಬಲವಾದ  ಜನಾದೇಶವನ್ನು ಪಡೆಯಬೇಕೆಂಬ ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರ ಲೆಕ್ಕಾಚಾರಕ್ಕೆ ಸಂಪೂರ್ಣ ತದ್ವಿರುದ್ಧವಾದಂತಿದೆ. ಅಂತೆಯೇ ಬ್ರೆಕ್ಸಿಟ್ ಮಾತುಕತೆ ಪ್ರಕ್ರಿಯೆ ಕೂಡ ವಿಳಂಬವಾಗುವ ಸಾಧ್ಯತೆ ಇದೆ. ಇದಲ್ಲದೆ ಥೆರೆಸಾ ಮೇ ಅವರ ರಾಜಿನಾಮೆಗೂ ವ್ಯಾಪಕ ಒತ್ತಡ ಹೇರಲಾಗುತ್ತಿದ್ದು, ಪ್ರಮುಖವಾಗಿ ಥೆರೆಸಾ ಮೇ ಅವರ ರಾಜಕೀಯ ಎದುರಾಳಿ ಲೇಬರ್ ಪಕ್ಷದ ಜೆರೆಮಿ ಕಾರ್ಬಿನ್ ಚುನಾವಣಾ ಸೋಲಿನ ಹೊಣೆ ಹೊತ್ತು ಥೆರೆಸಾ ಮೇ ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ಕನ್ಸರ್ವೇಟಿವ್ ಪಕ್ಷ ಚುನಾವಣಾ ಸೋಲನ್ನು ಒಪ್ಪಿಕೊಂಡಿದೆಯಾದರೂ ಥೆರೆಸಾ ಮೇ ರಾಜಿನಾಮೆ ನೀಡುತ್ತಾರೆಯೇ ಅಥವಾ ಇಲ್ಲವೆ ಎಂಬ ವಿಚಾರದ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಪ್ರಧಾನಿ ಥೆರೆಸಾ ಮೇ  ಅವರು ಇಂದು ಮಧ್ಯಾಹ್ನ ಬ್ರಿಟನ್ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದ ಸ್ಕೈ ನ್ಯೂಸ್‌ "ತೆರೇಸಾ ಮೇ ಬಹುಮತ ಕಳೆದುಕೊಳ್ಳಲಿದ್ದಾರೆ' ಎಂದು ಭವಿಷ್ಯ ನುಡಿದಿತ್ತು. ಅಂತೆಯೇ ಅವರ ಕನ್ಸರ್ವೇಟಿವ್ ಪಕ್ಷಕ್ಕೆ 315ರಿಂದ 325 ಸ್ಥಾನಗಳು ಮಾತ್ರ ದಕ್ಕಬಹುದು  ಎಂದು ಹೇಳಿತ್ತು. ಇದೀಗ ಈ ಸಮೀಕ್ಷೆಯ ವರದಿಯೇ ನಿಜವಾಗಿದ್ದು, ಕನ್ಸರ್ವೇಟಿವ್ ಪಕ್ಷ 316 ಸ್ಥಾನಗಳನ್ನು ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com