ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಾಕ್ ಮೂಲದ ಉಗ್ರರಿಂದಲೇ ಮುಂಬೈ ದಾಳಿ: ಪಾಕ್ ಮಾಜಿ ಭದ್ರತಾ ಸಲಹೆಗಾರ ಹೇಳಿಕೆ!

2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭೀಕರ ಉಗ್ರದಾಳಿಯನ್ನು ಪಾಕಿಸ್ತಾನ ಮೂಲದ ಉಗ್ರಗಾಮಿಗಳೇ ನಡೆಸಿದ್ದು ಎಂದು ಪಾಕಿಸ್ತಾನ ಮಾಜಿ ಭದ್ರತಾ ಸಲಹೆಗಾರ ಜನರಲ್ ಮಹಮುದ್ ಅಲಿ ದುರಾನಿ ಹೇಳಿದ್ದಾರೆ.

ಇಸ್ಲಾಮಾಬಾದ್: 2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭೀಕರ ಉಗ್ರದಾಳಿಯನ್ನು ಪಾಕಿಸ್ತಾನ ಮೂಲದ ಉಗ್ರಗಾಮಿಗಳೇ ನಡೆಸಿದ್ದು ಎಂದು ಪಾಕಿಸ್ತಾನ ಮಾಜಿ ಭದ್ರತಾ ಸಲಹೆಗಾರ ಜನರಲ್ ಮಹಮುದ್ ಅಲಿ  ದುರಾನಿ ಹೇಳಿದ್ದಾರೆ.

ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ ಕೇಂದ್ರದಲ್ಲಿ ನಡೆಯುತ್ತಿರುವ 19ನೇ ಏಷ್ಯಾ ಭದ್ರತಾ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಮಹಮುದ್ ಅಲಿ ದುರಾನಿ, 2008ರ ನವೆಂಬರ್ 26ರಂದು  ನಡೆದ ಮುಂಬೈ ಮೇಲೆ ನಡೆದ ಉಗ್ರ ದಾಳಿ ಪಾಕಿಸ್ತಾನ ಮೂಲದ ಉಗ್ರರಿಂದ ನಡೆದಿದ್ದು, ಇದೊಂದು ಸಾಂಪ್ರದಾಯಿಕ ಗಡಿಯಾಚೆಗಿನ ಭಯೋತ್ಪಾದನೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಮಾಜಿ ಸಲಹೆಗಾರರೊಬ್ಬರು ಮುಂಬೈ  ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಉಗ್ರರ ಕೈವಾಡದ ಕುರಿತು ಮಾತನಾಡಿರುವುದು ಇದೇ ಮೊದಲಾಗಿದ್ದು, ದುರಾನಿ ಹೇಳಿಕೆ ಇದೀಗ ಪಾಕಿಸ್ತಾನ ಸರ್ಕಾರದ ಮುಜುಗರಕ್ಕೆ ಕಾರಣವಾಗಿದೆ.

ಇಷ್ಟು ದಿನ ಮುಂಬೈ ದಾಳಿ ಪ್ರಕರಣ ಸಂಬಂಧ ಭಾರತ ಸಾಕ್ಷ್ಯಾಧಾರಗಳನ್ನು ಒದಗಿಸುತ್ತಿಲ್ಲ ಎಂದು ನೆಪವೊಡ್ಡಿ ತನಿಖೆಗೆ ಹಿಂದೇಟು ಹಾಕುತ್ತಿತ್ತು. ಆದರೆ ಇದೀಗ ಸ್ವತಃ ಪಾಕಿಸ್ತಾನದ ಮಾಜಿ ಭದ್ರತಾ ಸಲಹೆಗಾರ ಜನರಲ್  ಮಹಮುದ್ ಅಲಿ ದುರಾನಿ ಅವರೇ ದಾಳಿಯಲ್ಲಿ ಪಾಕ್ ಮೂಲದ ಉಗ್ರರ ಕೈವಾಡದ ಕುರಿತು ಹೇಳಿಕೆ ನೀಡಿರುವುದು ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡ್ಡಿದೆ.

2008ರ ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗವಾಗಿ ಮುಂಬೈ ಆಗಮಿಸಿದ ಉಗ್ರಗಾಮಿಗಳು ಛತ್ರಪತಿ ಶಿವಾಜಿ ಟರ್ಮಿನಸ್, ಒಬೆರಾಯ್ ಟ್ರೈಡೆಂಟ್ ಹೊಟೆಲ್, ತಾಜ್ ಮಹಲ್ ಪ್ಯಾಲೆಸ್ ಹೊಟೆಲ್,  ಲಿಯೋಪಾಲ್ಡ್ ಕೆಫೆ, ಕಾಮಾ ಆಸ್ಪತ್ರೆ, ಜ್ಯೂಯಿಷ್ ಸಮುದಾಯದ ಕಟ್ಟಡದ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಒಟ್ಟಾರೆ 164 ಮಂದಿ ಸಾವಿಗೀಡಾಗಿ 360ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ದಾಳಿಕೋರರ  ಪೈಕಿ ಅಜ್ಮಲ್ ಕಸಬ್ ಎಂಬ ಉಗ್ರಗಾಮಿ ಜೀವಂತವಾಗಿ ಸೆರೆಸಿಕ್ಕಿದ್ದ. ನಾಲ್ಕು ವರ್ಷಗಳ ಬಳಿಕ ಅಂದರೆ 2012 ನವೆಂಬರ್ 21ರಂದು ಆತನನ್ನು ಗಲ್ಲಿಗೇರಿಸಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com