ನರೇಂದ್ರ ಮೋದಿ- ಚೀನಾ
ನರೇಂದ್ರ ಮೋದಿ- ಚೀನಾ

'ಪಂಚ್' ಎಫೆಕ್ಟ್: ಮೋದಿ ಮಾರುತದಿಂದ ಚೀನಾಗೆ ನಡುಕ, ಗಡಿ ವಿವಾದ ಬಗೆಹರಿಸಿಕೊಳ್ಳಲು ಡ್ರ್ಯಾಗನ್ ಉತ್ಸುಕ

ಉತ್ತರ ಪ್ರದೇಶದಲ್ಲಿ ಮೋದಿ ಮೋಡಿಗೆ ಚೀನಾ ಸಹ ಬೆರಗಾಗಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಮೋದಿ ಪ್ರಭಾವ ದುಪ್ಪಟ್ಟಾಗಿರುವುದು ಚೀನಾಗೆ ಸಣ್ಣ ಭಯ ಆವರಿಸುವಂತೆ ಮಾಡಿದೆ ಎಂಬುದು ಸ್ಪಷ್ಟವಾಗಿದೆ.
ಬೀಜಿಂಗ್: ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಐತಿಹಾಸಿಕ ಗೆಲುವು ಕೇವಲ ಪಾಕಿಸ್ತಾನ, ಬಾಂಗ್ಲಾಗೆ ಸಂಬಂಧಿಸಿದ ಭಾರತದ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಉತ್ತರ ಪ್ರದೇಶದಲ್ಲಿ ಮೋದಿ ಮೋಡಿಗೆ ಚೀನಾ ಸಹ ಬೆರಗಾಗಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಮೋದಿ ಪ್ರಭಾವ ದುಪ್ಪಟ್ಟಾಗಿರುವುದು ಚೀನಾಗೆ ಸಣ್ಣ ಭಯ ಆವರಿಸುವಂತೆ ಮಾಡಿದೆ ಎಂಬುದು ಸ್ಪಷ್ಟವಾಗಿದೆ. 
ಪಂಚ ರಾಜ್ಯಗಳಲ್ಲಿ ಮೋದಿ ಮಾರುತವನ್ನು ವಿಶ್ಲೇಷಿಸಿರುವ ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ, ಉತ್ತರ ಪ್ರದೇಶದ ಗೆಲುವಿನಿಂದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತಷ್ಟು ಬಲಿಷ್ಠಗೊಂಡಿದೆ. ಚುನಾವಣೆಯ ನಂತರ ಮೋದಿ ಮತ್ತಷ್ಟು ಕಠಿಣ, ಬಲಿಷ್ಠ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. 
ಉತ್ತರ ಪ್ರದೇಶದ ಚುನಾವಣೆಯ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರು 2019 ರ ಸಾರ್ವತ್ರಿಕ ಚುನಾವಣೆಯನ್ನು ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲದೇ ಹಲವು ವಿಶ್ಲೇಷಕರು ಮೋದಿ 2 ನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದಿದೆ. 
ಬಲಿಷ್ಠ ಮೋದಿಯಿಂದ ಭಾರತಕ್ಕೆ ಒಳಿತಾಗಲಿದೆ. ಭಾರತದ ಈಗಿನ ಕಠಿಣ ರೀತಿ ಭಾರತದ ಅಭಿವೃದ್ಧಿಯಿಂದ ನಿಸಂದೇಹವಾಗಿ ಒಳ್ಳೆಯದೇ ಆಗಿದೆ. ಆದರೆ ಇದೇ ಕಠಿಣತೆ ಬೇರೆ ರಾಷ್ಟ್ರಗಳೊಂದಿಗೆ ರಾಜಿ ಮಾಡಿಕೊಳ್ಳುವ ವಿಷಯಕ್ಕೆ ಅಡ್ಡಿಯಾಗಬಹುದೆಂದು ಗ್ಲೋಬಲ್ ಟೈಮ್ಸ್ ಆತಂಕ ವ್ಯಕ್ತಪಡಿಸಿದೆ. 
ಅಂತಾರಾಷ್ಟ್ರೀಯ ಅಖಾಡದಲ್ಲಿ ಯಾರಿಗೂ ಅಹಿತವಾಗದಂತೆ ನಡೆದುಕೊಳ್ಳುವ ಭಾರತದ ಈ ಹಿಂದಿನ ಸ್ವಭಾವ ಈಗ ಬದಲಾಗುತ್ತಿದ್ದು, ಅನ್ಯ ರಾಷ್ಟ್ರಗಳೊಂದಿನ ಮಾತುಕತೆಗಳಲ್ಲಿ ತನ್ನ ಹಿತಾಸಕ್ತಿಗಳಿಗೆ ಪೂರಕವಾಗಿ ಕಠಿಣ ನಿರ್ಧಾರ ಕೈಗೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಚೀನಾ ಹಾಗೂ ರಷ್ಯಾದೊಂದಿಗಿನ ಸಂಬಂಧವನ್ನು ವೃದ್ಧಿಸಿ ಮೋದಿ ಶಾಂಘೈ ಸಹಕಾರ ಸಂಸ್ಥೆಯಲ್ಲಿ ಭಾರತದ ಸದಸ್ಯತ್ವಕ್ಕೆ ಪ್ರಸ್ತಾಪವಿಟ್ಟಿದ್ದು, ಅಮೆರಿಕ, ಜಪಾನ್ ನೊಂದಿಗೆ ರಕ್ಷಣಾ ಸಹಕಾರ ವೃದ್ಧಿಸಿದ್ದು, ದಕ್ಷಿಣ ಚೀನಾ ಸಮುದ್ರದ ವಿಷಯ ಹಾಗೂ ಏಷ್ಯಾ-ಪೆಸಿಫಿಕ್ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ತೆಗೆದುಕೊಂಡು ಅಮೆರಿಕಾಗೆ ಬೆಂಬಲಿಸಿದ್ದು ಭಾರತ ತನ್ನ ಹಿತಾಸಕ್ತಿಗಳಿಗೆ ಪೂರಕವಾಗಿ ಕಠಿಣ ನಿರ್ಧಾರ ಕೈಗೊಳ್ಳುತ್ತಿರುವುದು ಉದಾಹರಣೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. 
ಇನ್ನು ಇದೇ ವೇಳೆ ಗಡಿ ವಿವಾದದ ಬಗ್ಗೆಯೂ ಗ್ಲೋಬಲ್ ಟೈಮ್ಸ್ ಬರೆದಿದ್ದು, ಭಾರತದೊಂದಿಗಿನ ಗಡಿ ವಿವಾದ ಸೇರಿದಂತೆ ಹಲವು ದಶಕಗಳಿಂದ ಬಗೆಹರಿಯದೇ ಉಳಿದಿರುವ ವಿವಾದಗಳು ಬಗೆಹರಿಯುವುದರ ಬಗ್ಗೆ ಚೀನಾ ಆಶಾವಾದಿಯಾಗಿದೆ ಎಂದು ಹೇಳಿದೆ. 

Related Stories

No stories found.

Advertisement

X
Kannada Prabha
www.kannadaprabha.com