ಮ್ಯಾಂಚೆಸ್ಟರ್ ದಾಳಿ ಬೆನ್ನಲ್ಲೇ ಬ್ರಿಟನ್ ನಲ್ಲಿ ಹೈ ಅಲರ್ಟ್; ಸೇನೆ ನಿಯೋಜನೆ

ಮ್ಯಾಂಚೆಸ್ಟರ್‌ ನಲ್ಲಿ ನಡೆದ ಭೀಕರ ಮಾನವ ಬಾಂಬ್‌ ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿ 59 ಜನ ಗಾಯಗೊಂಡ ಬೆನ್ನಲ್ಲೇ ಬ್ರಿಟನ್ ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಿ ಸೇನೆ ನಿಯೋಜಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್‌: ಅಮೆರಿಕ ಪಾಪ್‌ ತಾರೆ ಏರಿಯಾನಾ ಗ್ರಾಂಡ್‌ ಅವರ ಸಂಗೀತ ಕಾರ್ಯಕ್ರಮವೊಂದರ ಬಳಿಕ ಮ್ಯಾಂಚೆಸ್ಟರ್‌ ನಲ್ಲಿ ನಡೆದ ಭೀಕರ ಮಾನವ ಬಾಂಬ್‌ ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿ 59 ಜನ ಗಾಯಗೊಂಡ ಬೆನ್ನಲ್ಲೇ  ಬ್ರಿಟನ್ ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಿ ಸೇನೆ ನಿಯೋಜಿಸಲಾಗಿದೆ.

ಸ್ವತಃ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರು ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಬೃಹತ್ ಉಗ್ರ ಜಾಲದಲ್ಲಿ ಹಲವು ಉಗ್ರರು ಸಂಪರ್ಕ ಸಾಧಿಸಿರಬಹುದು. ಹೀಗಾಗಿ ದೇಶಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು  ಹೇಳಿದ್ದಾರೆ. ಅಂತೆಯೇ ಬ್ರಿಟನ್ ನಾದ್ಯಂತ ಶಸ್ತ್ರಸಜ್ಜಿತ ಪೊಲೀಸರು ಹಾಗೂ ಸೇನೆಯನ್ನು ನಿಯೋಜಿಸಲಾಗಿದೆ. ಮ್ಯಾಂಚೆಸ್ಟರ್ ದಾಳಿ ಬಳಿಕೆ ಬ್ರಿಟನ್ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಥೆರೆಸಾ ಮೇ ಅವರು, "ಈಗಾಗಲೇ  ಶಸ್ತ್ರಸಜ್ಜಿತ ಪೊಲೀಸರು ಬ್ರಿಟನ್ ಪ್ರಜೆಗಳ ರಕ್ಷಣೆ ಮಾಡುತ್ತಿದ್ದಾರೆ. ಇದೀಗ ಅವರ ಜಾಗಕ್ಕೆ ಸೇನೆಯನ್ನು ನಿಯೋಜಿಸಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ರಕ್ಷಣಾ ಜವಾಬ್ದಾರಿಯನ್ನು ಸೇನೆ ತೆಗೆದುಕೊಳ್ಳಲಿದೆ".

"ಹೆಚ್ಚಿನ ಜನ ಸೇರುವ ಪ್ರಮುಖ ಕಾರ್ಯಕ್ರಮಗಳಲ್ಲೂ ಸೇನಾ ರಕ್ಷಣೆ ಒದಗಿಸಲಾಗುತ್ತದೆ. ಸೇನೆಗೆ ಸ್ಥಳೀಯ ಪೊಲೀಸರು ಸಾಥ್ ನೀಡಲಿದ್ದು, ಪ್ರಜೆಗಳ ರಕ್ಷಣೆಯ ಜವಾಬ್ದಾರಿ ಹೊಂದಿರುತ್ತಾರೆ. ಈ ಹಿಂದೆಂದಿಗಿಂತಲೂ ಪ್ರಸ್ತುತ  ಉಗ್ರದಾಳಿ ಸಾಧ್ಯತೆ ಹೆಚ್ಚಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ" ಎಂದು ಥೆರೆಸಾ ಮೇ ಹೇಳಿದರು.

ಅಮೆರಿಕದ ಪಾಪ್‌ ತಾರೆ ಏರಿಯಾನಾ ಗ್ರಾಂಡ್‌ ಅವರ ಸಂಗೀತ ಸಮಾರಂಭದ ವೇಳೆ ಬ್ರಿಟನ್‌ನ ಕೈಗಾರಿಕಾ ನಗರವೆಂದೇ ಖ್ಯಾತಿ ಪಡೆದಿರುವ ಮ್ಯಾಂಚೆಸ್ಟರ್‌ನಲ್ಲಿ ಭೀಕರ ಆತ್ಮಾಹುತಿ ಬಾಂಬ್‌ ದಾಳಿ ಸಂಭವಿಸಿತ್ತು. ಇದರಲ್ಲಿ 22  ಮಂದಿ ಸಾವನ್ನಪ್ಪಿ 59 ಜನ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ಕುಖ್ಯಾತ ಉಗ್ರ ಸಂಘಟನೆಯಾದ ಐಸಿಸ್‌ (ಇಸ್ಲಾಮಿಕ್‌ ಸ್ಟೇಟ್‌) ಹೊತ್ತಿದೆ.

2005ರ ಜುಲೈ 7ರಂದು ಬ್ರಿಟನ್‌ ಕಂಡ ಪೈಶಾಚಿಕ ದಾಳಿಯ ನಂತರದ ಅತಿ  ಭೀಕರ ದಾಳಿ ಇದಾಗಿದೆ. ಮ್ಯಾಂಚೆಸ್ಟರ್‌ ಅರೇನಾ ಸಭಾಂಗಣದಲ್ಲಿ ಏರಿಯಾನಾ ಅವರ ಸಂಗೀತ ರಾತ್ರಿ ಏರ್ಪಾಡಾಗಿತ್ತು. ಆಗ ಆಗಮಿಸಿದ ಲಿಬಿಯಾ ಮೂಲದ ಆತ್ಮಹತ್ಯಾ ಬಾಂಬರ್‌ ಸಲ್ಮಾನ್‌ ಅಬೇದಿ ಭಾರತೀಯ ಕಾಲಮಾನ  ನಸುಕಿನ 3 ಗಂಟೆಗೆ ಈ ದಾಳಿ ನಡೆಸಿದ್ದಾನೆ. ಭಾರಿ ಪ್ರಮಾಣದ ಸುಧಾರಿತ ಸ್ಫೋಟಕಗಳನ್ನು ಈತ ಹೊತ್ತಿದ್ದ. ದಾಳಿಯಲ್ಲಿ ಆತನೂ ಸತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ, ಘಟನೆಗೆ ಸಂಬಂಧಿಸಿದಂತೆ 23 ವರ್ಷದ  ಯುವಕನೊಬ್ಬನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com