ಸಿಡ್ನಿ: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೆಂದು ದೇಶಾದ್ಯಂತ ನಡೆದ ಮತದಾನದಲ್ಲಿ ಆಸ್ಟ್ರೇಲಿಯನ್ನರು ಭಾರೀ ಸಂಖ್ಯೆಯಲ್ಲಿ ಒಲವು ತೋರಿಸಿದ್ದು, ಪ್ರಧಾನ ಮಂತ್ರಿ ಮಾಲ್ಕಮ್ ಟರ್ನ್ಬುಲ್, ಸಂಸತ್ತಿನಲ್ಲಿ ಇದು ಕಾನೂನಾಗಿ ಜಾರಿಗೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಸಲಿಂಗ ವಿವಾಹದ ಬಗ್ಗೆ ನಡೆಸಲಾದ ಎರಡು ತಿಂಗಳ ಅಂಚೆ ಸಮೀಕ್ಷೆಯಲ್ಲಿ ಆಚ್ಚರಿಯ ಫಲಿತಾಂಶ ಬಂದಿದ್ದು ಶೇಕಡಾ 61.6 ಮಂದಿ ಸಲಿಂಗ ವಿವಾಹ ಬೇಕೆಂದು ಮತ್ತು ಶೇಕಡಾ 38.4 ಮಂದಿ ಬೇಡವೆಂದು ಮತ ಹಾಕಿದ್ದಾರೆ ಎಂದು ಆಸ್ಟ್ರೇಲಿಯಾದ ಅಂಕಿಅಂಶ ವಿಭಾಗ ತಿಳಿಸಿದೆ.
ಜನರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪರವಾಗಿ ಮತ ಬಂದಿರುವುದರಿಂದ ಈ ವರ್ಷ ಕ್ರಿಸ್ ಮಸ್ ಗೆ ಮುನ್ನ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿ ಕಾನೂನು ಜಾರಿಗೆ ಅಧಿಕಾರಿಗಳಿಗೆ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ತಿಳಿಸಿದ್ದಾರೆ.
ಇದೀಗ ಕಾನೂನು ಜಾರಿಗೆ ತರುವುದು ನಮ್ಮ ಕೆಲಸ ಎಂದು ಪ್ರಧಾನಿ ಸಮೀಕ್ಷೆಯ ಫಲಿತಾಂಶ ಹೊರಬಂದ ನಂತರ ಹೇಳಿದ್ದಾರೆ. ಇದರಲ್ಲಿ ಜನರ ಅಭಿಪ್ರಾಯಗಳು ಏನೇ ಇದ್ದರೂ ಅದನ್ನು ಗೌರವಿಸಬೇಕಾದುದು ನಮ್ಮ ಕರ್ತವ್ಯ. ನಾವು ಜನರಲ್ಲಿ ಅಭಿಪ್ರಾಯ ಕೇಳಿದ್ದಕ್ಕೆ ಅವರು ನೀಡಿದ್ದಾರೆ. ಫಲಿತಾಂಶ ನಿಸ್ಸಂದಿಗ್ಧವಾಗಿ ಬಂದಿದೆ ಮತ್ತು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದ ಪ್ರತಿ ರಾಜ್ಯ ಮತ್ತು ಪ್ರಾಂತ್ಯಗಳಲ್ಲಿ ಶೇಕಡಾ 60ರಷ್ಟು ಮಂದಿ ಸಲಿಂಗ ವಿವಾಹ ಬೇಕು ಎಂದರೆ ನ್ಯೂ ಸೌತ್ ವೇಲ್ ನ ಹೆಚ್ಚಿನ ಜನರು ಮಾತ್ರ ಬೇಡ ಎಂದಿದ್ದಾರೆ. ಇಲ್ಲಿ ಶೇಕಡಾ 57.8 ರಷ್ಟು ಜನರು ಮಾತ್ರ ಸಲಿಂಗ ವಿವಾಹಕ್ಕೆ ಒಪ್ಪಿಕೊಂಡಿದ್ದಾರೆ.