ಚೀನಾದ 'ಒಬೋರ್' ಗೆ ಮೊದಲ ಹಿನ್ನಡೆ; ಸಿಪಿಇಸಿಯಿಂದ ಡ್ಯಾಮ್ ಯೋಜನೆ ಕೈ ಬಿಟ್ಟ ಪಾಕಿಸ್ತಾನ!

ಭಾರತದ ವಿರೋಧದ ನಡುವೆಯೇ ಚಾಲನೆ ಪಡೆದಿದ್ದ ಚೀನಾ ದೇಶದ ಬಹು ನಿರೀಕ್ಷಿತ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಮೊದಲ ಹಿನ್ನಡೆಯಾಗಿದ್ದು, ಯೋಜನೆ ವ್ಯಾಪ್ತಿಯಿಂದ ಪಾಕಿಸ್ತಾನ ತನ್ನ ಬಹುಕೋಟಿ ವೆಚ್ಚದ ಡ್ಯಾಮ್ ನಿರ್ಮಾಣ ಯೋಜನೆಯನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಭಾರತದ ವಿರೋಧದ ನಡುವೆಯೇ ಚಾಲನೆ ಪಡೆದಿದ್ದ ಚೀನಾ ದೇಶದ ಬಹು ನಿರೀಕ್ಷಿತ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಮೊದಲ ಹಿನ್ನಡೆಯಾಗಿದ್ದು, ಯೋಜನೆ ವ್ಯಾಪ್ತಿಯಿಂದ ಪಾಕಿಸ್ತಾನ ತನ್ನ ಬಹುಕೋಟಿ  ವೆಚ್ಚದ ಡ್ಯಾಮ್ ನಿರ್ಮಾಣ ಯೋಜನೆಯನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಪಾಕಿಸ್ತಾನದ ಅಧಿಕಾರಿಗಳು ಮಾಹಿತಿ ನೀಡಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಸಿಪಿಇಸಿ ಚೌಕಟ್ಟಿನಲ್ಲಿ ಸೇರಿಸುವ ಪ್ರಸ್ತಾವವನ್ನು ಪಾಕಿಸ್ತಾನ ಸರ್ಕಾರ ಕೈಬಿಟ್ಟಿದೆ  ಎಂದು ಹೇಳಲಾಗಿದೆ. ಚೀನಾ ಮತ್ತು ಪಾಕಿಸ್ತಾನ ಸರ್ಕಾರಗಳ ಮೆಗಾ ಯೋಜನೆಯ ಮಾಲಿಕತ್ವ ಸೇರಿದಂತೆ ಚೀನಾ ವಿಧಿಸಿದ್ದ ಕಟ್ಟುನಿಟ್ಟಿನ ಷರತ್ತುಗಳ ಹಿನ್ನೆಲೆಯಲ್ಲಿ 1,400 ಕೋಟಿ ಡಾಲರ್ ವೆಚ್ಚದ ಡಯಾಮೆರ್- ಭಾಷಾ ಅಣೆಕಟ್ಟು  ಯೋಜನೆಯನ್ನು ಕೈಬಿಡಲಾಗಿದೆ ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಪಾಕ್ ಆಕ್ರಮಿತ ಪ್ರದೇಶದಲ್ಲಿ ಇಂಡಸ್ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿದ್ದ ಈ ಯೋಜನೆಗೆ ಭಾರತ ಈ ಹಿಂದೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಭಾರತದ ವಿರೋಧದ ನಡುವೆಯೂ ವಿಶ್ವಬ್ಯಾಂಕ್‌ ನಂಥಹ  ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಪಾಕಿಸ್ತಾನ ಪ್ರಯತ್ನ ಮುಂದುವರಿಸಿತ್ತು. ಆದರೆ ಇದೀಗ ವಿಶ್ವಬ್ಯಾಂಕ್, ಎಡಿಬಿ, ಚೀನಾ ದೇಶದ ಹಣಕಾಸು ಸಂಸ್ಥೆಗಳು ಈ ಅಣೆಕಟ್ಟು ಯೋಜನೆಗೆ ನೆರವು ನೀಡಲು  ನಿರಾಕರಿಸಿವೆ. 
ಇದೇ ಕಾರಣಕ್ಕೆ ಪಾಕಿಸ್ತಾನ ತನ್ನದೇ ಸಂಪನ್ಮೂಲದಿಂದ ಅಣೆಕಟ್ಟು ನಿರ್ಮಿಸಲು ಸರ್ಕಾರ ಯೋಜಿಸಿದೆ. ಈ ಬಗ್ಗೆ ಆಂಗ್ಲ ದೈನಿಕವೊಂದು ವರದಿ ಪ್ರಕಟಿಸಿದ್ದು, ಅದರಲ್ಲಿ ಪಾಕಿಸ್ತಾನದ ಜಲ ಸಂಪನ್ಮೂಲ ಕಾರ್ಯದರ್ಶಿ ಶುಮೈಲ್  ಖ್ವಾಜಾ ಅವರು, ಡಯಾಮೆರ್- ಭಾಷಾ ಅಣೆಕಟ್ಟು ಯೋಜನೆಗೆ ಪಾಕಿಸ್ತಾನ ಸ್ವಂತ ಮೂಲದಿಂದ ನಿಧಿ ಸಂಗ್ರಹಿಸಲಿದೆ ಎಂದು ಹೇಳಿದ್ದಾರೆ ಎಂದು ವರದಿ ಪ್ರಕಟಿಸಿದೆ. ನವೆಂಬರ್ 21ರಂದು ಇಸ್ಲಾಮಾಬಾದ್‌ ನಲ್ಲಿ ಚೀನಾ ಜತೆಗೆ  ನಡೆಸಲು ಉದ್ದೇಶಿಸಿದ್ದ ಏಳನೇ ಜಂಟಿ ಸಹಕಾರ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸಲು ಪಾಕ್ ನಿರ್ಧರಿಸಿತ್ತು. "ಯೋಜನೆಗೆ ಹಣಕಾಸು ನೆರವು ನೀಡಲು ಚೀನಾ ವಿಧಿಸಿರುವ ಷರತ್ತು ಕಾರ್ಯಸಾಧುವಲ್ಲ ಹಾಗೂ ನಮ್ಮ  ಹಿತಾಸಕ್ತಿಗೆ ವಿರುದ್ಧವಾದದ್ದು" ಎಂದು ಪಾಕಿಸ್ತಾನದ ಜಲ ಮತ್ತು ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಜಾಮಿಲ್ ಹುಸೇನ್ ಹೇಳಿದ್ದಾರೆ.
ಅಂತೆಯೇ ಯೋಜನೆಗೆ ಸ್ವಂತ ಸಂಪನ್ಮೂಲ ಒದಗಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಪ್ರಧಾನಿ ಶಾಹೀದ್ ಖಾಕನ್ ಅಬ್ಬಾಸಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಚೀನಾ- ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆ ಬೆಲ್ಟ್ ಅಂಡ್ ರೋಡ್ ಇನೀಶಿಯೇಟಿವ್ (ಬಿಆರ್‌ಬಿ) ಯೋಜನೆಯ ಭಾಗವಾಗಿದ್ದು, ಪಾಕ್ ಆಕ್ರಮಿತ  ಪ್ರದೇಶದ ಮೂಲಕ ಇದು ಹಾದುಹೋಗುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com