ಸೈನಿಕರ ತಿಕ್ಕಾಟ: ಉತ್ತಮ ಸಂವಹನಕ್ಕಾಗಿ 'ಹಿಂದಿ' ಕಲಿಯುವಂತೆ ಚೀನಾ ಸೈನಿಕರಿಗೆ ರಕ್ಷಣಾ ತಜ್ಞರ ಸಲಹೆ

ಪದೇ ಪದೇ ವಿವಾದಕ್ಕೆ ಕಾರಣವಾಗುತ್ತಿರುವ ಇಂಡೋ-ಚೀನಾ ಸೈನಿಕರ ತಿಕ್ಕಾಟಕ್ಕೆ ಚೀನಾ ರಕ್ಷಣಾ ತಜ್ಞರು ಹೊಸದೊಂದು ಮಾರ್ಗ ಕಂಡುಕೊಂಡಿದ್ದು, ಭಾರತೀಯ ಸೈನಿಕರೊಂದಿಗಿನ ಸಂವಹನ ಸಂಪರ್ಕಕ್ಕಾಗಿ ಹಿಂದಿ ಕಲಿಯುವಂತೆ ಚೀನಾ ಸೈನಿಕರಿಗೆ ಸಲಹೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಪದೇ ಪದೇ ವಿವಾದಕ್ಕೆ ಕಾರಣವಾಗುತ್ತಿರುವ ಇಂಡೋ-ಚೀನಾ ಸೈನಿಕರ ತಿಕ್ಕಾಟಕ್ಕೆ ಚೀನಾ ರಕ್ಷಣಾ ತಜ್ಞರು ಹೊಸದೊಂದು ಮಾರ್ಗ ಕಂಡುಕೊಂಡಿದ್ದು, ಭಾರತೀಯ ಸೈನಿಕರೊಂದಿಗಿನ ಸಂವಹನ ಸಂಪರ್ಕಕ್ಕಾಗಿ  ಹಿಂದಿ ಕಲಿಯುವಂತೆ ಚೀನಾ ಸೈನಿಕರಿಗೆ ಸಲಹೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ ಡೊಕ್ಲಾಂ ವಿವಾದದ ಬಳಿಕ ಉಭಯ ಗಡಿಗಳಲ್ಲಿ ಶೀತಲ ಸಮರ ಮುಂದುವರೆದಿದೆ. ಅಲ್ಲದೆ ಉಭಯ ಪಡೆಗಳ ನಡುವೆ ಆಗಾಗ ವಾಗ್ವಾದ ನಡೆದ ಕುರಿತೂ  ವರದಿಗಳು ದಾಖಲಾಗುತ್ತಿದ್ದು, ಇದಕ್ಕೆ ಅನಗತ್ಯ ತಪ್ಪುಗ್ರಹಿಕೆಗಳೇ ಕಾರಣ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಚೀನೀ ಸೈನಿಕರು ಹಿಂದಿ ಕಲಿಯಬೇಕು ಎಂದು ಚೀನಾ ರಕ್ಷಣಾ ತಜ್ಞರು ಸಲಹೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಐಟಿಬಿಪಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರು, ಗಡಿಯಲ್ಲಿನ ಅನಗತ್ಯ ವಿವಾದ ಪರಿಹಾರಕ್ಕೆ ಭಾರತೀಯ ಸೈನಿಕರು ಮ್ಯಾಂಡರಿನ್ ಕಲಿಯಬೇಕು ಎಂದು ಸಲಹೆ  ನೀಡಿದ್ದರು. ಮ್ಯಾಂಡರಿನ್ ಚೀನಾ-ಟಿಬೆಟ್ ಪ್ರಾಂತ್ಯದ ಭಾಷೆಯಾಗಿದ್ದು, ಬಹುತೇಕ ಚೀನೀ ಸೈನಿಕರಿಗೆ ಮ್ಯಾಂಡರಿನ್ ಭಾಷೆಯ ಅರಿವಿದೆ. ಇದೇ ಕಾರಣಕ್ಕೆ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರು ಮ್ಯಾಂಡರಿನ್ ಕಲಿಯಬೇಕು  ಎಂದು ಸಲಹೆ ನೀಡಿದ್ದರು.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಾಂಘೈ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸಸ್ 'ಇಂಟರ್ನ್ಯಾಷನಲ್ ರಿಲೇಶನ್ಸ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಸಂಶೋಧಕ ಹೂ ಝಿಯಾಂಗ್ ಅವರು ಗಡಿಯಲ್ಲಿ ಪಹರೆ ಕಾಯುವ ಉಭಯ  ಪಡೆಯ ಸೈನಿಕರು ಎರಡೂ ದೇಶಗಳ ಭಾಷೆ ಮತ್ತು ಸಂಸ್ಕೃತಿಯ ಅರಿತಿರಬೇಕು. ಆಗ ಮಾತ್ರ ಅನಗತ್ಯ ತಪ್ಪುಗ್ರಹಿಕೆಗಳಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com