ನೋಟು ನಿಷೇಧ, ಜಿಎಸ್‌ಟಿ ವಿಫಲ, ಧ್ರುವೀಕರಣದ ರಾಜಕೀಯದಿಂದ ದೇಶಕ್ಕೆ ಅಪಾಯ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಮತ್ತು ಜಿಎಸ್ ಟಿ ಜಾರಿ ವಿಫಲವಾಗಿದ್ದು, ದೇಶದಲ್ಲಿ ಧ್ರುವೀಕರಣ ರಾಜಕೀಯ ಅಪಾಯಕಾರಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬರ್ಕ್ ಲೇ ವಿಶ್ವ ವಿದ್ಯಾಲಯದಲ್ಲಿ ರಾಹುಲ್ ಗಾಂಧಿ
ಬರ್ಕ್ ಲೇ ವಿಶ್ವ ವಿದ್ಯಾಲಯದಲ್ಲಿ ರಾಹುಲ್ ಗಾಂಧಿ
ಕ್ಯಾಲಿಫೋರ್ನಿಯಾ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಮತ್ತು ಜಿಎಸ್ ಟಿ ಜಾರಿ ವಿಫಲವಾಗಿದ್ದು, ದೇಶದಲ್ಲಿ ಧ್ರುವೀಕರಣ ರಾಜಕೀಯ ಅಪಾಯಕಾರಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಂಗಳವಾರ ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಬರ್ಕ್ ಲೇ ವಿಶ್ವವಿದ್ಯಾಲಯದಲ್ಲಿ ‘ಪ್ರಚಲಿತ ಭಾರತ ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರದ ಮುಂದಿನ ಹಾದಿ’ ಎಂಬ ವಿಷಯದ ಕುರಿತು  ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, "ದ್ವೇಷ, ಕೋಪ ಮತ್ತು ಹಿಂಸೆಯು ನಮ್ಮನ್ನು ಹಾಳುಮಾಡುತ್ತದೆ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ತಪ್ಪುಗಳು  ನುಸುಳಿದ್ದು, ಈ ವಿಚಾರವನ್ನು ದೇಶದ ಪ್ರತೀಯೊಬ್ಬ ಪ್ರಜೆಯೂ ತಿಳಿದಿದ್ದಾನೆ. ಪ್ರಶ್ನೆ ಮಾಡುವ ವಿಚಾರವಾದಿ ಪತ್ರಕರ್ತರನ್ನು ಕೊಲ್ಲಲಾಗುತ್ತಿದೆ. ಇದೇ ಹಿಂಸಾಚಾರ ನಮ್ಮ ಅಜ್ಜಿ ಹಾಗೂ ತಂದೆಯನ್ನು ಬಲಿ ಪಡೆದಿತ್ತು. ಆದರೆ ಈ  ಹಿಂಸಾಚಾರದಿಂದ ಹಿಂಸಾಚಾರ ಹೆಚ್ಚಾಗುತ್ತದೆಯೇ ಹೊರತು ನ್ಯಾಯ ಸಿಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ನೋಟು ನಿಷೇಧ ಕೇಂದ್ರ ಸರ್ಕಾರ ಮಾಡಿದ ಅತೀ ದೊಡ್ಡ ತಪ್ಪು. ಇದರಿಂದ ದೇಶದ ಅಭಿವೃದ್ಧಿ ದರ ಕುಂಠಿತವಾಗಿದೆ.  ಅವೈಜ್ಞಾನಿಕವಾಗಿ ಜಾರಿ ಮಾಡಿದ ಜಿಎಸ್ ಟಿಯಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಜಿಎಸ್‌ ಟಿಯಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ನೋಟು  ಅಮಾನ್ಯೀಕರಣ ತಪ್ಪು ನಿರ್ಧಾರ. ನಮ್ಮ ಕಾಂಗ್ರೆಸ್ ಪಕ್ಷದ ಯೋಜನೆಗಳಿಗೆ ಬಿಜೆಪಿ ಹೆಸರು ಬದಲಾಯಿಸಿಕೊಂಡಿದೆ. ಯಾವುದೇ ನೀತಿಯನ್ನಾಗಲಿ ಅಥವಾ ಯೋಜನೆಯನ್ನಾಗಲಿ ಜಾರಿಗೆ ಮಾಡಬೇಕಾದರೆ ಕಾಂಗ್ರೆಸ್​ ಸರ್ಕಾರ  ಮೊದಲು ಚರ್ಚಿಸುತ್ತಿತ್ತು. ಬದಲಾಗಿ ಒಪ್ಪಿಗೆ ಇಲ್ಲದೆ ಹೇರುತ್ತಿರಲಿಲ್ಲ. ಆದರೆ ಮೋದಿ ಸರ್ಕಾರ ಚರ್ಚೆಗಳಿಲ್ಲದೇ ತನ್ನ ಮೂಗಿನ ನೇರಕ್ಕೆ ಆಲೋಚಿಸಿ ನೀತಿಗಳನ್ನು ಯೋಜನೆಗಳನ್ನು ಜನರ ಮೇಲೆ ಹೇರುತ್ತಿದೆ ಎಂದು ಮೋದಿ  ಸರ್ಕಾರದ ನಡೆಯನ್ನು ರಾಹುಲ್ ಟೀಕಿಸಿದರು.
ಮೋದಿಯವರ ಕೆಲವೊಂದು ಕೌಶಲಗಳು ಉತ್ತಮವಾಗಿದೆ. ಮೋದಿಯವರು ನನಗಿಂತ ಉತ್ತಮ ಸಂವಹನಕಾರ ಎಂಬುದರಲ್ಲಿ ಸಂದೇಹವಿಲ್ಲ. ಏಕಕಾಲದಲ್ಲಿ 3-4 ವಿಭಿನ್ನ ಗುಂಪಿನ ಜನರಿಗೆ ಸಂದೇಶ ಸಾರಬಲ್ಲ ಸಾಮರ್ಥ್ಯ  ಮೋದಿಯವರಲ್ಲಿದೆ. ಆದರೆ, ನನಗನಿಸುತ್ತದೆ ಸುಮ್ಮನೆ ಮಾತನಾಡುವುದರಿಂದ ಪ್ರಯೋಜನವಿಲ್ಲ ಜನರ ಜತೆ ಬೆರೆತು ಕೆಲಸ ನಿರ್ವಹಿಸಬೇಕು ಎಂದು ವ್ಯಂಗ್ಯವಾಡಿದರು.
ಭಾರತ ಎಡ ಪಂಥೀಯವೋ ಅಥವಾ ಬಲ ಪಂಥೀಯವೋ ಎಂದು ಹಿಂದೆ ನಮ್ಮಜ್ಜಿ ಇಂದಿರಾ ಗಾಂಧಿ ಅವರನ್ನು ಇಲ್ಲಿ ಪ್ರಶ್ನಿಸಲಾಗಿತ್ತು. ಅದಕ್ಕೆ ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು, ಭಾರತ ನೇರವಾಗಿ ಮತ್ತು  ಎತ್ತರವಾಗಿ ನಿಲ್ಲುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದರು. ನಮ್ಮಪ್ಪ ರಾಜೀವ್ ಗಾಂಧಿ ಮತ್ತು ಟೆಕ್ನೋಕ್ರಾಟ್ ಸ್ಯಾಂ ಪಿತ್ರೋಡಾ ಅವರು ಭಾರತಕ್ಕೆ ಕಂಪ್ಯೂಟರ್ ಗಳ ಅಗತ್ಯವಿದೆ ಎಂದು ಕೇಳಿದಾಗ ಎಲ್ಲರೂ ನಕ್ಕು ಲೇವಡಿ  ಮಾಡಿದ್ದರು. ಭಾರತದಂತಹ ರಾಷ್ಟ್ರಕ್ಕೆ ಕಂಪ್ಯೂಟರ್ ಗಳು ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದ್ದರು. ನಿಜ ಹೇಳಬೇಕು ಅಂದರೆ, ಮುಂದೆ ಭಾರತದ ಪ್ರಧಾನಿಯಾದ ಬಿಜೆಪಿ ನಾಯಕರೊಬ್ಬರು ಸಹ ಭಾರತಕ್ಕೆ ಕಂಪ್ಯೂಟರ್ ಗಳು ಏಕೆ  ಬೇಕು ಎಂದು ಕೊಂಕು ತೆಗೆದಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಶ್ಮೀರದಲ್ಲಿ ಹಿಂಸಾತ್ಮಕ ಘಟನೆಗಳು ಹೆಚ್ಚಾಗಿವೆ. ಉಗ್ರರ ಚಟುವಟುಕೆ ತೀವ್ರವಾಗಿದೆ. ಕಾಶ್ಮೀರದಲ್ಲಿ ಶಾಂತಿ ನೆಲೆಸುವುದಕ್ಕಾಗಿ 9 ವರ್ಷಗಳ ಕಾಲ ಯುಪಿಎ ಸರ್ಕಾರ ಮಾಡಿದ್ದ ಕೆಲಸವನ್ನು ಈಗಿನ ಎನ್ ಡಿಎ ಸರ್ಕಾರ ಕೇವಲ 30  ದಿನಗಳಲ್ಲಿ ಹಾಳುಗೆಡವಿದೆ ಎಂದು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com