ಅಸಹಿಷ್ಣುತೆ, ನಿರುದ್ಯೋಗ ಭಾರತದ ಬಹುದೊಡ್ಡ ಸಮಸ್ಯೆಗಳು: ರಾಹುಲ್‌ ಗಾಂಧಿ

ಭಾರತ ಅಸಹಿಷ್ಣುತೆ ಮತ್ತು ನಿರುದ್ಯೋಗದಂತಹ ಬಹುದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಮತ್ತು ಭಾರತದ ಅಭಿವೃದ್ಧಿಗೆ....
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on
ವಾಷಿಂಗ್ಟನ್‌: ಭಾರತ ಅಸಹಿಷ್ಣುತೆ ಮತ್ತು ನಿರುದ್ಯೋಗದಂತಹ ಬಹುದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದು ರಾಷ್ಟ್ರೀಯ ಭದ್ರತೆಗೆ ಮತ್ತು ಭಾರತದ ಅಭಿವೃದ್ಧಿಗೆ ದೊಡ್ಡ ಸವಾಲಾಗಿದೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಎರಡು ವಾರಗಳ ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಇಂದು ಹಲವು ಸಭೆಗಳಲ್ಲಿ ಭಾಗವಹಿಸಿದರು. ಸೆಂಟರ್‌ ಫಾರ್‌ ಅಮೆರಿಕನ್‌ ಪ್ರೋಗ್ರೆಸ್‌(ಸಿಎಪಿ) ಆಯೋಜಿಸಿದ್ದ ಭಾರತ ಮತ್ತು ದಕ್ಷಿಣ ಏಷ್ಯಾದ ತಜ್ಞರೊಂದಿಗಿನ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಭಾರತದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದ್ದು, ಇದರಿಂದ ದೇಶ ಅಪಾಯದ ಪರಿಸ್ಥಿತಿ ತಲುಪುವ ಸಂಭವವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಭೆಯಲ್ಲಿ ಸಿಎಪಿ ಮುಖ್ಯಸ್ಥರಾದ ನೀರಾ ತಂಡನ್‌, ಭಾರತಕ್ಕೆ ಅಮೆರಿಕ ರಾಯಭಾರಿಯಾಗಿದ್ದ ರಿಚರ್ಡ್‌ ವರ್ಮಾ ಹಾಗೂ ಹಿಲರಿ ಕ್ಲಿಂಟನ್‌ ಅವರ ಸಲಹೆಗಾರ ಜಾನ್‌ ಪೊಡೆಸ್ಟಾ ಸೇರಿ ಅನೇಕರು ಸಭೆಯಲ್ಲಿದ್ದರು.
ಇನ್ನು ‘ದಿ ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆಯ ಸಂಪಾದಕೀಯ ಮಂಡಳಿ ಜತೆಗೆ ಆಫ್‌ ದಿ ರೆಕಾರ್ಡ್ ಚರ್ಚೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, ಜಾಗತಿಕವಾಗಿ ಅದರಲ್ಲೂ ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಸಂಬಂಧ ಕಳವಳ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರು ವಿಷಯವನ್ನು ಮೂಲದಿಂದ ಅರಿತಿರುವ ನಾಯಕರಂತೆ ಕಂಡುಬಂದರು. ವಿಷಯಜ್ಞಾನವೇ ಇಲ್ಲದ ವ್ಯಕ್ತಿಯಲ್ಲ. ಅವರೊಂದಿಗೆ ಚರ್ಚೆಯಲ್ಲಿ ಭಾಗಿಯಾದ ಎಲ್ಲರೂ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದಾಗಿ ಪ್ರಜಾಡಳಿತ ತಜ್ಞ ಪುನೀತ್‌ ಆಹ್ಲುವಾಲಿಯಾ ಅವರು ತಿಳಿಸಿದ್ದಾರೆ.
‘ರಾಹುಲ್‌ ಗಾಂಧಿ ಅವರ ಯೋಚನೆಯಲ್ಲಿನ ಸ್ಪಷ್ಟತೆ, ತಿಳಿವಳಿಕೆ ಹಾಗೂ ನಿಷ್ಪಕ್ಷಪಾತ ಧೋರಣೆ ಪ್ರಭಾವ ಬೀರುವಂಥದು. ತರ್ಕಬದ್ಧ, ಉತ್ತಮ ರೀತಿಯಲ್ಲಿ ಯೋಚಿಸುತ್ತಾರೆ ಹಾಗೂ ವಿಷಯವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವಿದೆ. ರಾಹುಲ್‌ ಅವರ ನಡೆ ಮತ್ತು ಸ್ವಭಾವಕ್ಕೆ ವಿರುದ್ಧವಾಗಿ ಅವರನ್ನು ಬಿಂಬಿಸಲಾಗಿದೆ. ಅವರ ವಿರೋಧಿಗಳು ನಕಾರಾತ್ಮ ಪ್ರಚಾರ ನಡೆಸಿದ್ದಾರೆ ಎಂದು ಸಾಗರೋತ್ತರ ಕಾಂಗ್ರೆಸ್ ಘಟಕದ ಪ್ರಮುಖರಾದ ಸ್ಯಾಮ್‌ ಪಿಟ್ರೋಡಾ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರು ನಾಳೆ ನ್ಯೂಜೆರ್ಸಿಯ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com