ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಮಾತನಾಡಿದ ಹಸೀನಾ, 1971ರ ಬಾಂಗ್ಲೇ ವಿಮೋಚನೆಯ ರಕ್ತಪಾತವನ್ನು ನೆನಪಿಸಿಕೊಂಡರು. "ಪಾಕಿಸ್ತಾನ ತನ್ನ ಸ್ವಾರ್ಥಕ್ಕಾಗಿ 1971ರಲ್ಲಿ ಬಾಂಗ್ಲಾದೇಶದಲ್ಲಿ ಸೇನಾ ಕಾರ್ಯಾಚರಣೆ ನಡೆಸಿ 30 ಲಕ್ಷ ಅಮಾಯಕ ಜನರ ಸಾವಿಗೆ ಕಾರಣವಾಗಿತ್ತು. ಅಂದಿನ ಬಾಂಗ್ಲಾ ‘ಬಿಡುಗಡೆಯ ಯುದ್ಧ’ದ ಸಂದರ್ಭದಲ್ಲಿ ಹತರಾದ ಜನರಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ತನ್ನ ದೇಶದ ಸಂಸತ್ತು ಇತ್ತೀಚೆಗೆ ಮಾರ್ಚ್ 25ನ್ನು ‘ಜನಾಂಗೀಯ ಹತ್ಯೆ ದಿನ’ ಎಂದು ಘೋಷಿಸಿದೆ" ಎಂದು ಹೇಳಿದರು.
1971 ಮಾರ್ಚ್ 25ರ ಮಧ್ಯರಾತ್ರಿ ಅಂದಿನ ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನಿ ಪಡೆಗಳು ಹಠಾತ್ ದಮನ ಕಾರ್ಯಾಚರಣೆ ನಡೆಸಿದ ಬಳಿಕ 1971ರ ಯುದ್ಧ ಸ್ಫೋಟಗೊಂಡಿತು ಹಾಗೂ ಯುದ್ಧವು ಡಿಸೆಂಬರ್ 16ರಂದು ಕೊನೆಗೊಂಡಿತು. ಅದೇ ವರ್ಷ ಪಾಕಿಸ್ತಾನ ಸೋಲೊಪ್ಪಿಕೊಂಡಿತು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸೈನಿಕರನ್ನು ಒಳಗೊಂಡ ಮಿತ್ರಪಡೆಗಳಿಗೆ ಢಾಕಾದಲ್ಲಿ ಪಾಕ್ ಸೇನೆ ಶರಣಾಯಿತು. ಒಂಬತ್ತು ತಿಂಗಳ ಕಾಲ ನಡೆದ ಯುದ್ಧದಲ್ಲಿ ಅಧಿಕೃತವಾಗಿ 30 ಲಕ್ಷ ಜನರು ಮೃತಪಟ್ಟಿದ್ದರು ಎಂದು ಶೇಕ್ ಹಸೀನಾ ಹೇಳಿದ್ದಾರೆ.