ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟ್ರಂಪ್ ವೀಸಾ ನೀತಿ: ಉತ್ತರ ಕೊರಿಯಾ, ಇರಾನ್, ವೆನೆಜುವೆಲಾ ಸೇರಿ 8 ರಾಷ್ಟ್ರಗಳಿಗೆ ನಿರ್ಬಂಧ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವೀಸಾ ನೀತಿಯಲ್ಲಿ ಉತ್ತರ ಕೊರಿಯಾ, ಇರಾನ್ ಮತ್ತು ವೆನೆಜುವೆಲಾ ಸೇರಿದಂತೆ ಒಟ್ಟು 8 ರಾಷ್ಟ್ರಗಳ ಪ್ರಜೆಗಳಿಗೆ ನಿರ್ಬಂಧ ಹೇರಲಾಗಿದೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವೀಸಾ ನೀತಿಯಲ್ಲಿ ಉತ್ತರ ಕೊರಿಯಾ, ಇರಾನ್ ಮತ್ತು ವೆನೆಜುವೆಲಾ ಸೇರಿದಂತೆ ಒಟ್ಟು 8 ರಾಷ್ಟ್ರಗಳ ಪ್ರಜೆಗಳಿಗೆ ನಿರ್ಬಂಧ ಹೇರಲಾಗಿದೆ.

ವಿಶ್ವದ ಹಲವು ರಾಷ್ಟ್ರಗಳ ವಿರೋಧದ ಹೊರತಾಗಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ನೂತನ ವೀಸಾ ನೀತಿ ಜಾರಿ ಮಾಡಿದ್ದು, ಪ್ರಸ್ತುತ ಜಾರಿಯಾಗಿರುವ ನೂತನ ವೀಸಾ ನೀತಿ ಅನ್ವಯ ವೀಸಾ ನಿರ್ಬಂಧ  ರಾಷ್ಟ್ರಗಳ ಪಟ್ಟಿಯನ್ನು ವಿಸ್ತರಣೆ ಮಾಡಲಾಗಿದೆ. ಅದರಂತೆ ಪ್ರಸ್ತುತ ವೀಸಾ ನಿರ್ಬಂಧ ರಾಷ್ಟ್ರಗಳ ಪಟ್ಟಿಗೆ ಉತ್ತರ ಕೊರಿಯಾ, ಇರಾನ್, ವೆನೆಜುವೆಲಾ ಸೇರಿ ಒಟ್ಟು 8 ರಾಷ್ಟ್ರಗಳ ಪ್ರಜೆಗಳಿಗೆ ವೀಸಾ ನಿರ್ಬಂಧ ಹೇರಲಾಗಿದೆ. ಆ  ಮೂಲಕ ಟ್ರಂಪ್ ವೀಸಾ ನಿರ್ಬಂಧ ರಾಷ್ಟ್ರಗಳ ಪಟ್ಟಿ 12ಕ್ಕೇರಿದೆ ಎಂದು ತಿಳಿದುಬಂದಿದೆ.

ಹೊಸ ನೀತಿ ಅನ್ವಯ ಚಾಡ್, ಇರಾನ್, ಲಿಬಿಯಾ, ಉತ್ತರ ಕೊರಿಯಾ, ಸೋಮಾಲಿಯಾ, ಸಿರಿಯಾ, ಯೆಮೆನ್ ಮತ್ತು ವೆನೆಜುವೆಲಾದ ಕೆಲ ಪ್ರಜೆಗಳ ಅಮೆರಿಕ ಪ್ರವೇಶವನ್ನು ನಿರ್ಬಂಧಿಸುತ್ತದೆ ಎನ್ನಲಾಗಿದೆ. ಈ ನೂತನ ವೀಸಾ  ನೀತಿ ಮುಂಬರುವ ಅಕ್ಟೋಬರ್ 18ರಿಂದ ಜಾರಿಗೆ ಬರಲಿದೆ.

ಪ್ರಮುಖವಾಗಿ ಉತ್ತರ ಕೊರಿಯಾ ಮತ್ತು ಸಿರಿಯಾ ಪ್ರಜೆಗಳನ್ನು ಕೇಂದ್ರವಾಗಿರಿಸಿಕೊಂಡು ಈ ವೀಸಾ ನಿರ್ಬಂಧ ಹೇರಲಾಗಿದೆ ಎಂದು ಹೇಳಲಾಗತ್ತಿದೆ. ಇನ್ನು ವೆನೆಜುವೆಲಾದ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ವೀಸಾ ನೀಡಲು  ಟ್ರಂಪ್ ಆಡಳಿತ ನಿರ್ಧರಿಸಿದ್ದು, ಆ ದೇಶದ ಪ್ರಜೆಗಳಿಗೆ ವಲಸೆರಹಿತ ವೀಸಾಗಳನ್ನು ನಿರಾಕರಿಸಲು ನಿರ್ಧರಿಸಲಾಗಿದೆ.

ಇನ್ನು ಈ ಹಿಂದೆ ಟ್ರಂಪ್ ಸರ್ಕಾರ ತೆಗೆದುಕೊಂಡಿದ್ದ 90 ದಿನಗಳ ವೀಸಾ ನಿರ್ಧಾರದ ಅವಧಿ ಮುಕ್ತಾಯವಾಗುತ್ತಿರುವ ಹಿನ್ನಲೆಯಲ್ಲಿ ನೂತನ ನೀತಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಟ್ರಂಪ್ ಸರ್ಕಾರ ಉಗ್ರರ ಪೋಷಣೆ ಮತ್ತು ರಕ್ಷಣೆಯಲ್ಲಿ ತೊಡಗಿರುವ ಪಾಕಿಸ್ತಾನ ಸೇರಿದಂತೆ 9 ಇಸ್ಲಾಮಿಕ್ ರಾಷ್ಟ್ರಗಳಿಂದ ಅಮೆರಿಕಾಗೆ ಬರುವವರ ಬಗ್ಗೆ ತೀವ್ರ ನಿಗಾ ವಹಿಸುವಂತೆ ನೀತಿಗಳನ್ನು ಒಳಗೊಂಡ ಹೊಸ ವೀಸಾ ನೀತಿಯ ಅನ್ವಯ 90 ದಿನಗಳವರೆಗೆ ಇರಾಕ್, ಲಿಬಿಯಾ, ಸೋಮಾಲಿಯಾ, ಸೂಡಾನ್, ಸಿರಿಯಾ, ಯೆಮೆನ್‌ನಿಂದ ಬರುವವರಿಗೆ ವೀಸಾ ನಿರಾಕರಿಸಿತ್ತು.

ಇನ್ನು ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಅಮೆರಿಕ ದೇಶವನ್ನು ವಿಶ್ವದ ನಂಬರ್ 1 ಸುರಕ್ಷಿತ ದೇಶವನ್ನಾಗಿ ಮಾಡಬೇಕು ಎನ್ನುವುದು ನನ್ನ ಗುರಿಯಾಗಿದೆ. ಹೀಗಾಗಿ ಕೆಲ ಕಠಿಣ ನಿರ್ಣಯಗಳು ಅನಿವಾರ್ಯ ಎಂದು  ಹೇಳಿದ್ದರು.

Related Stories

No stories found.

Advertisement

X
Kannada Prabha
www.kannadaprabha.com