ಯುದ್ಧಕ್ಕೆ ಉ.ಕೊರಿಯಾ ಸನ್ನದ್ಧ?: ಸಂಶೋಧನಾ ಕೇಂದ್ರಗಳಿಂದ ಕ್ಷಿಪಣಿಗಳ ರವಾನೆ!

ಈ ಹಿಂದೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದ ಉತ್ತರ ಕೊರಿಯಾ ತನ್ನ ರಕ್ಷಣಾ ಸಂಶೋಧನಾ ಕೇಂದ್ರಗಳಲ್ಲಿದ್ದ ಅತ್ಯಾಧುನಿಕ ಕ್ಷಿಪಣಿಗಳನ್ನು ರವಾನೆ ಮಾಡುತ್ತಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ಯೋಂಗ್ಯಾಂಗ್: ಈ ಹಿಂದೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದ ಉತ್ತರ ಕೊರಿಯಾ ತನ್ನ ರಕ್ಷಣಾ ಸಂಶೋಧನಾ ಕೇಂದ್ರಗಳಲ್ಲಿದ್ದ ಅತ್ಯಾಧುನಿಕ ಕ್ಷಿಪಣಿಗಳನ್ನು ರವಾನೆ ಮಾಡುತ್ತಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆಯನ್ನು ಖಂಡಿಸಿದ್ದ ಅಮೆರಿಕ ತಾನು ಉತ್ತರ ಕೊರಿಯಾ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಸಿದ್ಧ ಎಂಬುದನ್ನು ಸಾಬೀತುಪಡಿಸಲು ಉತ್ತರ ಕೊರಿಯಾ ಗಡಿಯಲ್ಲಿ ತನ್ನ ಬಾಂಬರ್ ಜೆಟ್ ಗಳ  ಹಾರಾಟ ನಡೆಸಿತ್ತು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಉತ್ತರ ಕೊರಿಯಾ ಅಮೆರಿಕ ಪ್ರಚೋದನೆ ಮುಂದುವರೆಸಿದರೆ ತಾನೂ  ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಅದೇ ರೀತಿಯಲ್ಲಿ ಉತ್ತರ ನೀಡಬೇಕಾಗುತ್ತದೆ. ಅಮೆರಿಕದ  ಬಾಂಬರ್ ಜೆಟ್ ಗಳನ್ನು ಹೊಡೆದುರುಳಿಸಬೇಕಾಗುತ್ತದೆ ಎಂದು ಹೇಳಿತ್ತು.

ಕಳೆದ ವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲೂ ಉತ್ತರ ಕೊರಿಯಾ ತನ್ನ ಈ ಹೇಳಿಕೆಯನ್ನು ಪುನರುಚ್ಛರಿಸಿತ್ತು. ಇದೀಗ ಅದಕ್ಕೆ ಇಂಬು ನೀಡುವಂತೆ ಉತ್ತರ ಕೊರಿಯಾದ ರಕ್ಷಣಾ ಸಂಶೋಧನಾ ಕೇಂದ್ರಗಳಲ್ಲಿರುವ  ಅತ್ಯಾಧುನಿಕ ಕ್ಷಿಪಣಿಗಳನ್ನು ಗೌಪ್ಯವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ಇಂತಹುದೇ ವರದಿಯನ್ನು ಅಮೆರಿಕದ ಗುಪ್ತಚರ ಮೂಲಗಳು ಕೂಡ ನೀಡಿದ್ದು, ಯಾವ ಉದ್ದೇಶದಿಂದ ಉತ್ತರ ಕೊರಿಯಾ  ತನ್ನ ಕ್ಷಿಪಣಿಗಳನ್ನು ಸ್ಥಳಾಂತರಿಸುತ್ತಿದೆ ಎಂಬ ವಿಚಾರ ಮಾತ್ರ ತಿಳಿದಿಲ್ಲ ಎಂದೂ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಉತ್ತರ ಕೊರಿಯಾ ಸರ್ಕಾರ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಅಲ್ಲದೆ ಈ ವರದಿಗಳು ತನ್ನ ಗಮನಕ್ಕೆ ಬಂದಿಲ್ಲ ಎಂದು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಮೂಲಗಳ ತಿಳಿಸಿರುಂತೆ ಇದೇ ಅಕ್ಟೋಬರ್ 10ರಂದು ಕಮ್ಯುನಿಸ್ಚ್ ಪಕ್ಷದ ಸಂಸ್ಥಾಪನಾ ದಿನವಿದ್ದು, ಅಂದು ವಿಶ್ವ ಸಮುದಾಯದ ಎದುರು ಉತ್ತರ ಕೊರಿಯಾ ತನ್ನ ಬಲ ಪ್ರದರ್ಶನ ಮಾಡಲು ಮುಂದಾಗಿರಬಹುದು ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದು ವರದಿಯಲ್ಲಿ ಅಕ್ಟೋಬರ್ 18ರಂದು ಚೀನಾದಲ್ಲಿ ಕಮ್ಯುನಿಸ್ಟ್ ಪಾರ್ಟಿ ಕಾಂಗ್ರೆಸ್ ಸಭೆ ಇದ್ದು, ಈ ವೇಳೆಗೆ ತನ್ನ ಬಲ ಪ್ರದರ್ಶನ ಮಾಡಲು ಉತ್ತರ ಕೊರಿಯಾ ಯೋಜನೆ ರೂಪಿಸಿರಬಹುದು  ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com