

ವಾಷಿಂಗ್ಟನ್ : ಚುನಾವಣೆ ಮಧ್ಯೆಯೂ ಭಾರತದ ಆರ್ಥಿಕ ಪ್ರಗತಿ ಮತ್ತು ರಚನಾತ್ಮಕ ಸುಧಾರಣೆಗಳು ವೇಗವಾಗಿ ಮುಂದುವರೆಯಬೇಕು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ- ಐಎಂಎಫ್ ಹೇಳಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಜೊತೆಗೆ ಮುಂದಿನ ವರ್ಷ ಹಲವು ರಾಜ್ಯಗಳ ಚುನಾವಣೆ ನಡೆಯಲಿದೆ. ಮಿಜೋರಾಮ್, ಛತ್ತೀಸ್ ಗಡ, ಮಧ್ಯಪ್ರದೇಶ, ರಾಜಸ್ತಾನ ವಿಧಾನಸಭಾ ಕ್ಷೇತ್ರ ಹಾಗೂ 2019ರ ಲೋಕಸಭಾ ಚುನಾವಣೆಯೂ ನಡೆಯಲಿದೆ.
ಚುನಾವಣೆಯ ಕಾರಣದಿಂದ ಭಾರತದ ರಚನಾತ್ಮಕ ಸುಧಾರಣೆ ವೇಗ ಕುಂಠಿತಗೊಳ್ಳಬಾರದು ಚುನಾವಣೆ ನಡುವೆಯೂ ಆರ್ಥಿಕ ಪ್ರಗತಿ ವೇಗ ಮುಂದುವರೆಯಬೇಕು ಎಂದು ಐಎಂಎಫ್ ನ ಏಷ್ಯಾ ಮತ್ತು ಫೆಸಿಪಿಕ್ ಇಲಾಖೆ ನಿರ್ದೇಶಕ ಚಾಂಗ್ ಯಂಗ್ ರೇ ಹೇಳಿದ್ದಾರೆ.
2018-19 ರ ಅವಧಿಯಲ್ಲಿ ಭಾರತದ ಆರ್ಥಿಕ ಪ್ರಗತಿಯ ದರ ಶೇ. 7.4 ರಷ್ಟಿದೆ ಎಂದು ಅಂದಾಜಿಸಲಾಗಿದೆ. ನಗದು ಕೊರತೆಯಿಂದ ಆರ್ಥಿಕ ಸುಧಾರಣೆಗೆ ತಾತ್ಕಾಲಿಕ ತಡೆಯಾಗಿದೆ ಎಂದು ರೇ ಹೇಳಿದ್ದಾರೆ.
ನೂತನ ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಅನುಷ್ಠಾನ ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಒಂದು ಮಹತ್ವದ ಸುಧಾರಣಾ ಕ್ರಮವಾಗಿದೆ ಎಂದು ಐಎಫ್ ಏಷ್ಯಾ ಮತ್ತು ಫೆಸಿಪಿಕ್ ಇಲಾಖೆ ಉಪ ನಿರ್ದೇಶಕ ಕೆನ್ ಕಾಂಗ್ ತಿಳಿಸಿದ್ದಾರೆ.
ಜಿಎಸ್ ಟಿ ತೆರಿಗೆಯಿಂದ ಉದ್ಯೋಗ ಹಾಗೂ ಆರ್ಥಿಕ ಬೆಳವಣಿಗೆಗೆ ನೆರವಾಗಲಿದ್ದು,ಹಣಕಾಸು ನೀತಿ ರಚನೆಯಲ್ಲಿ ಮತ್ತೊಂದು ಗುರಿ ಸಾಧಿಸಲಾಗಿದೆ. ಆರ್ಥಿಕ ವೇಗ ಹೀಗೆಯೇ ಮುಂದುವರೆಯಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಅವರು ಹೇಳಿದ್ದಾರೆ.