ಭಾರತದ ಮೇಲೆ ಕಣ್ಣಿಡಲು ಬಾಹ್ಯಾಕಾಶ ಯೋಜನೆಗೆ ಪಾಕ್ ಸಿದ್ಧತೆ

ಭಾರತದ ಮೇಲೆ ನಿಗಾ ವಹಿಸಲು ಮತ್ತು ವಿದೇಶಿ ಉಪಗ್ರಹಗಳ ಮೇಲಿನ ಅವಲಂಬನೆ ತಗ್ಗಿಸುವುದಕ್ಕಾಗಿ ಪಾಕಿಸ್ತಾನ ಮುಂದಿನ ಹಣಕಾಸು ವರ್ಷದಲ್ಲಿ ತನ್ನ ಮಹತ್ವಾಕಾಂಕ್ಷೆಯ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್‌: ಭಾರತದ ಮೇಲೆ ನಿಗಾ ವಹಿಸಲು ಮತ್ತು ವಿದೇಶಿ ಉಪಗ್ರಹಗಳ ಮೇಲಿನ ಅವಲಂಬನೆ ತಗ್ಗಿಸುವುದಕ್ಕಾಗಿ ಪಾಕಿಸ್ತಾನ ಮುಂದಿನ ಹಣಕಾಸು ವರ್ಷದಲ್ಲಿ ತನ್ನ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯನ್ನು ಪ್ರಕಟಿಸಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. 
ಭಾರತದ ಮೇಲೆ ಕಣ್ಣಿಡಲು ಮತ್ತು ಮಿಲಿಟರಿ ಹಾಗೂ ನಾಗರಿಕ ಉದ್ದೇಶಗಳಿಗಾಗಿ ಬಾಹ್ಯಾಕಾಶ ಯೋಜನೆಗಳನ್ನು ಆರಂಭಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಡಾನ್‌ ನ್ಯೂಸ್ ವರದಿ ಮಾಡಿದೆ. 
ಮಿಲಿಟರಿ ಹಾಗೂ ನಾಗರಿಕ ಉದ್ದೇಶಗಳಿಗೆ ಪಾಕಿಸ್ತಾನ ಮುಖ್ಯವಾಗಿ ಅಮೆರಿಕ ಹಾಗೂ ಫ್ರೆಂಚ್ ಉಪಗ್ರಹಗಳನ್ನೇ ಅವಲಂಬಿಸಿದ್ದು, ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಉಪಗ್ರಹ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಮುಂಬರುವ 2018-19ನೇ ಸಾಲಿನ ಬಜೆಟ್‌ನಲ್ಲಿ ಪಾಕಿಸ್ತಾನ ಸರ್ಕಾರ ಈ ಬಾಹ್ಯಾಕಾಶ ಮತ್ತು ಬಾಹ್ಯಾಂತರಿಕ್ಷ ಸಂಶೋಧನಾ ಸಂಸ್ಥೆ(ಸುಪಾರ್ಕೊ)ಗೆ 470 ಕೋಟಿ ರು.ಗಳನ್ನು ಮೀಸಲಿಟ್ಟಿದೆ. ಇದರಲ್ಲಿ 255 ಕೋಟಿ ಮೌಲ್ಯದ ಮೂರು ಹೊಸ ಯೋಜನೆಗಳೂ ಸೇರಿವೆ ಎಂದು ಪತ್ರಿಕೆ ವರದಿ ಮಾಡಿದೆ.
'ಸುಪಾರ್ಕೊ' 2005ರಿಂದೀಚೆಗೆ ಪಾಕಿಸ್ತಾನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಮತ್ತು ವಿದ್ಯಾರ್ಥಿಗಳ ಮಧ್ಯೆ ಶಾಂತಿಯುತ ಬಳಕೆಯನ್ನು ಉತ್ತೇಜಿಸಲು ಶ್ರಮಿಸುತ್ತಿದೆ. 
ಬಹು ಉದ್ದೇಶಿತ ಉಪಗ್ರಹಕ್ಕಾಗಿ (ಪಾಕ್‌ಸ್ಯಾಟ್‌-ಎಂಎಂ1)135 ಕೋಟಿ ರು ಒದಗಿಸಲಾಗಿದ್ದು, ಕರಾಚಿ, ಲಾಹೋರ್‌ ಮತ್ತು ಇಸ್ಲಾಮಾಬಾದ್‌ಗಳಲ್ಲಿ ಪಾಕಿಸ್ತಾನ ಬಾಹ್ಯಾಕಾಶ ಕೇಂದ್ರಗಳನ್ನು ಸ್ಥಾಪಿಸಲು 100 ಕೋಟಿ ರುಪಾಯಿ ಒದಗಿಸಿದೆ. 
ಕರಾಚಿಯಲ್ಲಿ 20 ಕೋಟಿ ರುಪಾಯಿಗಳ ವೆಚ್ಚದಲ್ಲಿ ಬಾಹ್ಯಾಕಾಶ ಅನ್ವಯಿಕ ಸಂಶೋಧನಾ ಕೇಂದ್ರ ಸ್ಥಾಪಿಸುವುದು ಮೂರನೆಯ ಮುಖ್ಯ ಯೋಜನೆ ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com