ಐಟಿ ಆಯ್ತು, ಈಗ ವಿದೇಶಿ ವಿದ್ಯಾರ್ಥಿಗಳ ಮೇಲೆ ಅಮೆರಿಕ ಸರ್ಕಾರದ ಕೆಂಗಣ್ಣು!

ವಿದೇಶಿ ಉದ್ಯೋಗಿಳ ಮೇಲೆ ಹೆಚ್1 ಬಿ ವೀಸಾ ನಿಯಮಗಳ ಬದಲಾವಣೆ ಮೂಲಕ ಆತಂಕ ಮೂಡಿಸಿದ್ದ ಟ್ರಂಪ್ ಸರ್ಕಾರ ಇದೀಗ, ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಮೇಲೂ ತನ್ನ ಗದಾ ಪ್ರಹಾರ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ವಿದೇಶಿ ಉದ್ಯೋಗಿಳ ಮೇಲೆ ಹೆಚ್1 ಬಿ ವೀಸಾ ನಿಯಮಗಳ ಬದಲಾವಣೆ ಮೂಲಕ ಆತಂಕ ಮೂಡಿಸಿದ್ದ ಟ್ರಂಪ್ ಸರ್ಕಾರ ಇದೀಗ, ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಮೇಲೂ ತನ್ನ ಗದಾ ಪ್ರಹಾರ ಮಾಡಿದೆ.
ಹೌದು, ಅಮೆರಿಕ ಸರ್ಕಾರ ವಿದೇಶಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುವು ಮಾಡಿಕೊಡುತ್ತಿದ್ದ ಸ್ಟೂಡೆಂಟ್ ಸ್ಟೇಟಸ್ ವೀಸಾ ನಿಯಮಾವಳಿಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ವಿದೇಶಿ ವಲಸಿಗರನ್ನು ಮಟ್ಟಹಾಕುವ ತಂತ್ರವಾಗಿ ಮತ್ತೊಂದು ಕಾನೂನು ಅಸ್ತ್ರ ಪ್ರಯೋಗಿಸಿರುವ ಅಮೆರಿಕ, ಸ್ಟೂಡೆಂಟ್ ಸ್ಟೇಟಸ್ (ವಿದ್ಯಾರ್ಥಿ ಸ್ಥಾನಮಾನ) ನೀತಿ ಉಲ್ಲಂಘಿಸುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಇರುವ ವಲಸೆ ನೀತಿಯ ಅಂತಿಮ ಮಾರ್ಗಸೂಚಿ ಪ್ರಕಟಿಸಿದೆ.
ಮೂಲಗಳ ಪ್ರಕಾರ ಇದು ಆಗಸ್ಟ್ 9ರಿಂದಲೇ ಜಾರಿಗೆ ಬಂದಿದೆ ಎನ್ನಲಾಗುತ್ತಿದ್ದು, ಈ ನಿಯಮ ಭಾರತೀಯ ವಿದ್ಯಾರ್ಥಿಗಳೂ ಸೇರಿದಂತೆ ಸೇರಿದಂತೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳುವಾಗುವ ಆತಂಕ ಸೃಷ್ಟಿಸಿದೆ. ಅಮೆರಿಕದಲ್ಲಿ ಚೀನಾದ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 1.86 ಲಕ್ಷ ಭಾರತೀಯ ವಿದ್ಯಾರ್ಥಿಗಳಿದ್ದಾರೆ.
ವಿದ್ಯಾರ್ಥಿಗಳಿಗೆ ಆತಂಕ ಏಕೆ?
ಭಾರತೀಯರೂ ಸೇರಿದಂತೆ ಅಮೆರಿಕದಲ್ಲಿನ ಬಹುತೇಕ ವಿದ್ಯಾರ್ಥಿಗಳು ಕೋರ್ಸ್ ಜತೆಗೆ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಾರೆ. ಹೊಸ ನಿಯಮದನ್ವಯ ವಿದ್ಯಾರ್ಥಿ ಯಾವುದೇ ಅರೆಕಾಲಿಕ ಕೆಲಸ, ಚಟುವಟಿಕೆ ನಡೆಸಿದರೆ ಸ್ವದೇಶಕ್ಕೆ ಹಿಂದಿರುಗಬೇಕಾಗುತ್ತದೆ. ಶಿಕ್ಷಣ ಸಂಸ್ಥೆಗಳು ಮಾಡುವ ವಿಳಂಬ, ನೀಡುವ ಅಂಕಿಅಂಶದಲ್ಲಿ ವ್ಯತ್ಯಾಸವಾದರೂ ವಿದ್ಯಾರ್ಥಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಕೋರ್ಸ್ ನಲ್ಲಿ ವಾರಕ್ಕೆ ನಿಗದಿತ ಕನಿಷ್ಠ ಅವಧಿಯನ್ನು ಪೂರೈಸುವಲ್ಲಿ ವಿಫಲವಾದರೆ, ಸ್ಟಡಿ ಪ್ರೋಗ್ರಾಮ್ ಅಪೂರ್ಣಗೊಂಡರೆ, ಮತ್ತೊಂದೆಡೆ ಅರೆಕಾಲಿಕ ವೃತ್ತಿ ನಿರ್ವಹಿಸುತ್ತ ಕೋರ್ಸ್ ಮುಗಿದು ಗ್ರೇಸ್ ಅವಧಿಗಿಂತಲೂ ಹೆಚ್ಚು ದಿನ ಅಮೆರಿಕದಲ್ಲಿ ವಾಸವಿದ್ದರೆ ಅದನ್ನು 'ಸ್ಟೂಡೆಂಟ್ ಸ್ಟೇಟಸ್' ನೀತಿ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಅಕ್ರಮ ನಿವಾಸಿ ಎಂದು ಘೋಷಣೆಯಾದ ನಂತರ ಅಗತ್ಯ ದಾಖಲೆಗಳೊಂದಿಗೆ ಇದನ್ನು ತೆರವುಗೊಳಿಸಲು ವಿದ್ಯಾರ್ಥಿ ಅರ್ಜಿ ಸಲ್ಲಿಸಬೇಕು. ಅದು ಇತ್ಯರ್ಥವಾಗುವವರೆಗೆ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದಿಲ್ಲ ಎಂದು ಹೊಸ ನೀತಿಯಲ್ಲಿ ಹೇಳಲಾಗಿದೆ ಎಂದು ತಿ್ಳಿದುಬಂದಿದೆ.
3 ವರ್ಷ ನಿರ್ಬಂಧ, ಅಕ್ರಮ ನಿವಾಸಿಗಳೆಂದು ಪಟ್ಟು!
ಪರಿಷ್ಕೃತ ನೀತಿ ಅನ್ವಯ ಸಾಕಷ್ಟು ಅವಧಿವರೆಗೆ ವೀಸಾ ಗಡುವು ಹೊಂದಿರುವ ವಿದ್ಯಾರ್ಥಿಗಳು 'ಸ್ಟೂಡೆಂಟ್ ಸ್ಟೇಟಸ್' ನೀತಿ ಉಲ್ಲಂಘಿಸಿದಲ್ಲಿ ಅವರ ಅವಲಂಬಿತರ ವಿರುದ್ಧವೂ ಕ್ರಮ ಜರುಗಿಸಲು ಅವಕಾಶ ಇದೆ. ಅಂಥಹವರು ಅಕ್ರಮ ನಿವಾಸಿಗಳು ಎಂದು ಪರಿಗಣಿಸಲ್ಪಡುತ್ತಾರೆ. ಈ ಹಿಂದಿನ ನೀತಿಯಲ್ಲಿ ನಿಯಮ ಉಲ್ಲಂಘಿಸಿರುವುದು ನ್ಯಾಯಾಲಯದಲ್ಲಿ ಸಾಬೀತಾದ ಬಳಿಕ ಅಥವಾ ಪೊಲೀಸ್ ತನಿಖೆಯಿಂದ ದೃಢಪಟ್ಟರಷ್ಟೇ ವಿದ್ಯಾರ್ಥಿಗಳನ್ನು ಅಕ್ರಮ ನಿವಾಸಿ ಎಂದು ಪರಿಗಣಿಸಲಾಗುತ್ತಿತ್ತು. ಜತೆಗೆ ದೇಶ ತೊರೆಯುವುದಕ್ಕೆ ಸೂಕ್ತ ಕಾಲಾವಕಾಶ ನೀಡಲಾಗುತ್ತಿತ್ತು. ಆದರೆ ಹೊಸ ಕಾನೂನು ಅತ್ಯಂತ ಕಠಿಣವಾಗಿದೆ. ಅಕ್ರಮ ನಿವಾಸಿ ಎಂದು ಘೋಷಣೆಯಾದ 180 ದಿನಗಳ ಒಳಗಾಗಿ ಸ್ವದೇಶಕ್ಕೆ ತೆರಳದ ವಿದ್ಯಾರ್ಥಿಗೆ 3 ರಿಂದ 10 ವರ್ಷ ಅಮೆರಿಕಕ್ಕೆ ಮರಳದಂತೆ ನಿರ್ಬಂಧ ವಿಧಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com