ಇಂಡೋನೇಷ್ಯಾ ಭೀಕರ ಸುನಾಮಿ: ಸಾವಿನ ಸಂಖ್ಯೆ 281ಕ್ಕೆ ಏರಿಕೆ, ನೂರಾರು ಮಂದಿ ನಾಪತ್ತೆ

ಇಂಡೋನೇಷ್ಯಾದಲ್ಲಿ ಕಳೆದ ಶನಿವಾರ ರಾತ್ರಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಿಂದಾಗಿ ಉಂಟಾದ ಭೀಕರ ಸುನಾಮಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬರೊಬ್ಬರಿ 281ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜಕಾರ್ತಾ: ಇಂಡೋನೇಷ್ಯಾದಲ್ಲಿ ಕಳೆದ ಶನಿವಾರ ರಾತ್ರಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಿಂದಾಗಿ ಉಂಟಾದ ಭೀಕರ ಸುನಾಮಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬರೊಬ್ಬರಿ 281ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಜ್ವಾಲಾಮುಖಿ ಸ್ಫೋಟದ ಪರಿಣಾಮ ಉಂಟಾದ ಸಮುದ್ರದಲ್ಲಿ ಎದ್ದ ರಕ್ಕಸ ಅಲೆಗಳ ಪರಿಣಾಮ ದ್ವೀಪರಾಷ್ಟ್ರಕ್ಕೆ ಭೀಕರ ಸುನಾಮಿ ಅಪ್ಪಳಿಸಿದೆ. ಶನಿವಾರ ರಾತ್ರಿ 9.30ರ ಸುಮಾರು (ಸ್ಥಳೀಯ ಕಾಲಮಾನ) ತೀರ ಪ್ರದೇಶಕ್ಕೆ ಅಪ್ಪಳಿಸಿದೆ. ದಕ್ಷಿಣ ಸುಮಾತ್ರಾ ಮತ್ತು ಜಾವಾದ ಪಶ್ಚಿಮ ಭಾಗಕ್ಕೆ ಅಲೆಗಳು ಅಪ್ಪಳಿಸಿವೆ. ಅಲೆಗಳ ಹೊಡೆತಕ್ಕೆ ಸಿಲುಕಿ ನೂರಾರು ಕಟ್ಟಡಗಳು ಜಖಂಗೊಂಡಿದ್ದು, ಸ್ಫೋಟದ ತೀವ್ರತೆಗೆ ಸಮುದ್ರದೊಳಗೆ ಭೂಕುಸಿತ ಉಂಟಾಗಿದೆ ಮತ್ತು ಜಾವಾ ಮತ್ತು ಸುಮಾತ್ರ ನಡುವೆ ಸುಂದ ಸ್ತ್ರೈತ್​ ಎಂಬಲ್ಲಿ ಸಣ್ಣ ದ್ವೀಪ ಉಂಟಾಗಿದೆ ಎಂದು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 281ಕ್ಕೆ ಏರಿಕೆಯಾಗಿದ್ದು, ನೂರಾರು ಮನೆಗಳು ಮತ್ತು ಇತರ ಕಟ್ಟಡಗಳು ಕುಸಿದಿದ್ದು 584 ಮಂದಿ ಗಾಯಗೊಂಡಿದ್ದಾರೆ. ಸುಂದಾ ಜಲಸಂಧಿ ಅಂಚಿನಲ್ಲಿ ಈ ಸುನಾಮಿ ಅಪ್ಪಳಿಸಿದೆ. ಟಿವಿ ಚಾನೆಲ್‌ಗಳು ಬಿತ್ತರಿಸಿದ ದೃಶ್ಯಗಳಲ್ಲಿ ಎಲ್ಲೆಲ್ಲೂ ಕುಸಿದ ಮನೆಗಳು, ಉರುಳಿದ ಮರಗಳು, ಮಗುಚಿ ಬಿದ್ದ ಕಾರುಗಳು ಗೋಚರಿಸುತ್ತಿವೆ. ರಾಕ್‌ಬ್ಯಾಂಡ್ ನಡೆಯುತ್ತಿದ್ದ ಹೊರಾಂಗಣ ವೇದಿಕೆಗೆ ಸುನಾಮಿ ಅಪ್ಪಳಿಸಿದಾಗ ಹಲವರು ನಾಪತ್ತೆಯಾದರು. 
ಇನ್ನು ದುರಂತದಲ್ಲಿ ನೂರಾರು ಮಂದಿ ನಾಪತ್ತೆಯಾಗಿದ್ದು, ದಕ್ಷಿಣ ಸುಮಾತ್ರ ಪ್ರಾಂತ್ಯವೊಂದರಲ್ಲೇ 100ಕ್ಕೂ ಅಧಿಕ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಂದಾ ಜಲಸಂಧಿ ಸುತ್ತಲಿನ ಕರಾವಳಿ ಪ್ರದೇಶದ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಕಡಲ ತೀರಕ್ಕೆ ಹೋಗದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಡಿಸೆಂಬರ್ 25ರ ವರೆಗೂ ಎತ್ತರದ ಅಲೆಗಳು ಅಪ್ಪಳಿಸುವ ಮುನ್ಸೂಚನೆ ನೀಡಲಾಗಿದೆ.
ಇನ್ನು ಸುನಾಮಿ ಸಂಭವಿಸಿದ ಪ್ರಾಂತ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸೇನೆ, ಸ್ಛಳೀಯ ಪೊಲೀಸರು, ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯ ಸ್ವಯಂ ಸೇವಾ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
1883 ಸಮುದ್ರದಲ್ಲಿ ಜ್ವಾಲಾಮುಖಿ ಸ್ಫೋಟಿಸಿ ಅನಾಕ್​ ಕ್ರಾಕಟೋ ದ್ವೀಪದಲ್ಲಿ ಜ್ವಾಲಾಮುಖಿ ಸೃಷ್ಟಿಯಾಗಿತ್ತು. ಆ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಸುನಾಮಿ ಉಂಟಾಗಿ ಸುಮಾರು 36 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದರು. ಆ ಬಳಿಕ 2004ರಲ್ಲಿ ಸುಮಾತ್ರಾ ಬಳಿ ಸಮುದ್ರದಲ್ಲಿ 9.3 ತೀವ್ರತೆಯ ಭೂಕಂಪನ ಉಂಟಾಗಿ ಸಮುದ್ರದಲ್ಲಿ ಎದ್ದ ಭೀಕರ ಸುನಾಮಿಯಿಂದ ಹಲವು ದೇಶಗಳಲ್ಲಿ 2,20,000 ಜನರು ಮೃತಪಟ್ಟಿದ್ದರು. ಇಂಡೋನೇಷ್ಯಾದಲ್ಲೇ 1,68,000 ಜನರು ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com