ಸಂಗ್ರಹ ಚಿತ್ರ
ವಿದೇಶ
ಪಾಕ್ ನೊಳಗೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಪ್ರಸ್ತಾಪವಿಲ್ಲ: ಪೆಂಟಗನ್
ಪಾಕಿಸ್ತಾನದೊಳಗೆ ಅಮೆರಿಕದ ಸೇನೆಯಿಂದ ಮಿಲಿಟರಿ ಕಾರ್ಯಾಚರಣೆ ನಡೆಸುವ ಯಾವುದೇ ರೀತಿ ಪ್ರಸ್ತಾಪ ತನ್ನ ಮುಂದೆ ಇಲ್ಲ ಎಂದು ಪೆಂಟಗನ್ ಸ್ಪಷ್ಟಪಡಿಸಿದೆ.
ವಾಷಿಂಗ್ಟನ್: ಪಾಕಿಸ್ತಾನದೊಳಗೆ ಅಮೆರಿಕದ ಸೇನೆಯಿಂದ ಮಿಲಿಟರಿ ಕಾರ್ಯಾಚರಣೆ ನಡೆಸುವ ಯಾವುದೇ ರೀತಿ ಪ್ರಸ್ತಾಪ ತನ್ನ ಮುಂದೆ ಇಲ್ಲ ಎಂದು ಪೆಂಟಗನ್ ಸ್ಪಷ್ಟಪಡಿಸಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿರುವ ಉಗ್ರರ ಮಟ್ಟ ಹಾಕುವಲ್ಲಿ ವಿಫಲವಾದ ಪಾಕ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ಅಮೆರಿಕ ಸರ್ಕಾರ ನೀಡುತ್ತಿದ್ದ ಆರ್ಥಿಕ ನೆರವನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ವಾರ ಪಾಕಿಸ್ತಾನದ ಹೊರವಲಯದಲ್ಲಿರುವ ಉಗ್ರ ಕ್ಯಾಂಪ್ ಗಳ ಮೇಲೆ ಅಮೆರಿಕ ಡ್ರೋಣ್ ದಾಳಿ ಕೂಡ ನಡೆಸಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಅಮೆರಕಿ ಪಾಕಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಲಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದ್ದವು.
ಈ ವರದಿಗೆ ಸಂಬಂಧಿಸಿದಂತೆ ಇದೀಗ ಸ್ಪಷ್ಟನೆ ನೀಡಿರುವ ಅಮೆರಿಕ ರಕ್ಷಣಾ ಇಲಾಖೆ ಪಾಕಿಸ್ತಾನದಲ್ಲಿ ಯಾವುದೇ ರೀತಿಯ ಮಿಲಿಟರಿ ಕಾರ್ಯಾಚರಣೆ ನಡೆಸುವ ಪ್ರಸ್ತಾಪ ತನ್ನ ಮುಂದಿಲ್ಲ ಎಂದು ಹೇಳಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪೆಂಟಗನ್, ಪಾಕಿಸ್ತಾನದಲ್ಲಿರುವ ಉಗ್ರರ ಮಟ್ಟಹಾಕಲು ಅಮೆರಿಕಕ್ಕೆ ಪಾಕಿಸ್ತಾನದ ನೆರವು ಅತ್ಯಗತ್ಯ. ಆದರೆ ಆ ನಿಟ್ಟಿನಲ್ಲಿ ಪಾಕಿಸ್ತಾನ ಕೈಗೊಳ್ಳುತ್ತಿರುವ ಕ್ರಮಗಳು ಸಮಾಧಾನಕರವಾಗಿಲ್ಲ. ಹಾಗೆಂದ ಮಾತ್ರಕ್ಕೆ ಪಾಕಿಸ್ತಾನದಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸುವುದಿಲ್ಲ. ಅಂತಹ ಯಾವುದೇ ಪ್ರಸ್ತಾಪ ಕೂಡ ತನ್ನ ಮುಂದಿಲ್ಲ. ಆದರೆ ಪಾಕಿಸ್ತಾನ ತನ್ನ ನೆಲದ ಉಗ್ರರ ಮಟ್ಟ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಲೇ ಬೇಕು. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಚುರುಕಿನ ನಡೆ ಅನಿವಾರ್ಯವಾಗಿದ್ದು, ಪಾಕಿಸ್ತಾನದಿಂದ ಆಶಾದಾಯಕ ನಡೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಪೆಂಟಗನ್ ಹೇಳಿದೆ.
ಟ್ರಂಪ್ ಸರ್ಕಾರ ಇತ್ತೀಚೆಗಷ್ಟೇ ತನ್ನ ನೂತನ ದಕ್ಷಿಣ ಏಷ್ಯಾ ನೀತಿಯನ್ನು ಜಾರಿಗೆ ತಂದಿತ್ತು. ಅದರಂತೆ ಪಾಕಿಸ್ತಾನದ ಕುರಿತು ತನ್ನ ನೀತಿಯನ್ನು ಅಮೆರಿಕ ಸರ್ಕಾರ ಕಠಿಣಗೊಳಿಸಿತ್ತು. ಅಲ್ಲದೆ ದಶಕಗಳಿಂದ ಅಮೆರಿಕ ಸರ್ಕಾರ ಪಾಕ್ ಗೆ ನೀಡುತ್ತಿದ್ದ ಆರ್ಥಿಕ ಮತ್ತು ಮಿಲಿಟರಿ ನೆರವಿಗೆ ಕತ್ತರಿ ಹಾಕಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ