ಪಾಕ್ ನಿಂದ ಹೊಸ ಮಾದರಿಯ ಪರಮಾಣು ಅಸ್ತ್ರ ಅಭಿವೃದ್ಧಿ, ಉಗ್ರರಿಗೆ ನೆರವು ಮುಂದುವರಿಕೆ: ಅಮೆರಿಕ ಗುಪ್ತಚರ ಇಲಾಖೆ

ಪಾಕಿಸ್ತಾನ ತನ್ನ ನೆಲದಲ್ಲಿ ಹೊಸ ಮಾದರಿಯ ಪರಮಾಣು ಅಸ್ತ್ರವನ್ನು ರಹಸ್ಯವಾಗಿ ಅಭಿವೃದ್ಧಿ ಪಡಿಸಿದೆ ಎಂದು ಅಮೆರಿಕ ಗುಪ್ತತರ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಪಾಕಿಸ್ತಾನ ತನ್ನ ನೆಲದಲ್ಲಿ ಹೊಸ ಮಾದರಿಯ ಪರಮಾಣು ಅಸ್ತ್ರವನ್ನು ರಹಸ್ಯವಾಗಿ ಅಭಿವೃದ್ಧಿ ಪಡಿಸಿದೆ ಎಂದು ಅಮೆರಿಕ ಗುಪ್ತತರ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಾಷಿಂಗ್ಟನ್ ನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅಮೆರಿಕದ ಗುಪ್ತಚರ ಇಲಾಖೆ ನಿರ್ದೇಶಕ ಡ್ಯಾನ್ ಕೋಟ್ಸ್ ಈ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದು, ಅಮೆರಿಕದ ಆರ್ಥಿಕ ನೆರವಿನ ಸ್ಥಗಿತದ ಹೊರತಾಗಿಯೂ  ಪಾಕಿಸ್ತಾನ ಉಗ್ರರಿಗೆ ನೀಡುತ್ತಿರುವ ನೆರವು ಅಬಾಧಿತವಾಗಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಭಾರತ, ಆಫ್ಘಾನಿಸ್ತಾನದಂತಹ ರಾಷ್ಟ್ರಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗುತ್ತಿದೆ. ಪಾಕಿಸ್ತಾನ ಉಗ್ರಗಾಮಿ  ಸಂಘಟನೆಗಳೊಂದಿಗಿನ ತನ್ನ ಸಂಬಂಧವನ್ನು ಮುಂದುವರೆಸಿದ್ದು, ಅಂತೆಯೇ ಚೀನಾದೊಂದಿಗೂ ಉತ್ತಮ ಬಾಂಧವ್ಯ ಮುಂದುವರೆಸಿದೆ ಎಂದು ಕೋಟ್ಸ್ ಹೇಳಿದ್ದಾರೆ.
ಅಮೆರಿಕ ಸಂಸದರ ಸಮಿತಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಟ್ಸ್ ಪ್ರಮುಖವಾಗಿ ಪಾಕಿಸ್ತಾನದ ಪರಮಾಣು ಯೋಜನೆ ಕುರಿತು ಆತಂಕ ವ್ಯಕ್ತಪಡಿಸಿದರು. ತಮಗೆ ದೊರೆತಿರುವ ಆಂತರಿಕ ಮಾಹಿತಿಗಳ  ಅನ್ವಯ ಪಾಕಿಸ್ತಾನ ರಹಸ್ಯವಾಗಿ ಬೃಹತ್ ಪರಮಾಣು ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಹೊಸ ಮಾದರಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಪೈಕಿ ಕಡಿಮೆ ದೂರಗಾಮಿ ಯುದ್ಧತಂತ್ರದ ಶಸ್ತ್ರಾಸ್ತ್ರಗಳು,  ನೌಕಾ ಕ್ಷಿಪಣಿಗಳು, ಖಂಡಾತರ, ವಾಯು ದಾಳಿ ಕ್ಷಿಪಣಿಗಳು, ದೂರಗಾಮಿ ಕ್ಷಿಪಣಿಗಳು ಕೂಡ ಸೇರಿವೆ ಎಂದು ಹೇಳಿದ್ದಾರೆ.
 ಈ ಹೊಸ ಮಾದರಿಯ ಶಸ್ತ್ರಾಸ್ತ್ರಗಳು ವಿಶ್ವ ಸಮುದಾಯಕ್ಕೆ ಹೊಸ ಭದ್ರತಾ ಸವಾಲೊಡ್ಡಿದ್ದು, ಇವುಗಳು ಉಗ್ರ ಕೈ ಸೇರಿದರೆ ಊಹೆಗೂ ನಿಲುಕದ ವಿಧ್ವಂಸ ಸಂಭವಿಸುತ್ತದೆ ಎಂದು ಕೋಟ್ಸ್ ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ  ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನ ದುಸ್ಸಾಹಸದಿಂದಾಗಿ ವಿಶ್ವ ಸಮುದಾಯ ಸಾಕಷ್ಟು ಆತಂಕ ಎದುರಿಸುತ್ತಿದೆ. ಈ ಹೊತ್ತಿನಲ್ಲಿ ಪಾಕಿಸ್ತಾನ ರಹಸ್ಯ ಪರಮಾಣು ಯೋಜನೆ ಮತ್ತಷ್ಟು ಆತಂಕ ತಂದೊಡ್ಡಿದೆ  ಎಂದು ಕೋಟ್ಸ್ ಹೇಳಿದ್ದಾರೆ.
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ಸಂಬಂಧದ ಕುರಿತು ಮಾತನಾಡಿದ ಕೋಟ್ಸ್, ದಕ್ಷಿಣ ಏಷ್ಯಾದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಕಾಶ್ಮೀರದಲ್ಲಿ ಉಗ್ರ ದಾಳಿ ಮತ್ತು ಇಂಡೋ-ಪಾಕ್ ಗಡಿಯಲ್ಲಿ ನಿರಂತರ ಗುಂಡಿನ  ಚಕಮಕಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ಸಂಬಂಧ ದಿನೇ ದಿನೇ ಮತ್ತಷ್ಟು ಹಳಸುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com