ಅನಾಣ್ಯೀಕರಣ, ಜಿಎಸ್‏ಟಿಯಿಂದಾಗಿ ಭಾರತದ ಬೆಳವಣಿಗೆ ಕುಂಠಿತ: ಟ್ರಂಪ್ ಆಡಳಿತ

ಹಿಂದಿನ ವರ್ಷಕ್ಕೆ ಹೋಲಿಸಿದರೆ 2017ರ ಮೊದಲ ತ್ರೈಮಾಸಿಕದಲ್ಲಿ ಅಮೆರಿಕಾದ ದ್ವಿಪಕ್ಷೀಯ ವ್ಯಾಪಾರ...
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್:  ಹಿಂದಿನ ವರ್ಷಕ್ಕೆ ಹೋಲಿಸಿದರೆ 2017ರ ಮೊದಲ ತ್ರೈಮಾಸಿಕದಲ್ಲಿ ಅಮೆರಿಕಾದ ದ್ವಿಪಕ್ಷೀಯ ವ್ಯಾಪಾರ ಕೊರತೆ ಭಾರತ ಸೇರಿದಂತೆ 4 ಪ್ರಮುಖ ರಾಷ್ಟ್ರಗಳ ಜೊತೆ ಹೆಚ್ಚಾಗಿದೆ ಎಂದು ಅಮೆರಿಕಾ ಆಡಳಿತ ವರದಿಯೊಂದರಲ್ಲಿ ತಿಳಿಸಿದೆ. ಭಾರತದ ರಚನಾತ್ಮಕ ಆರ್ಥಿಕ ಸುಧಾರಣೆಗಳಿಂದ ಭಾರತದ ಬೆಳವಣಿಗೆ ಕುಂಠಿತವಾಗಿದೆ ಎಂದು ಕೂಡ ಅದು ಹೇಳಿದೆ.

ಅಮೆರಿಕಾ ಅಧ್ಯಕ್ಷರ ಆರ್ಥಿಕ ವರದಿ(ಇಆರ್ ಪಿ) ಯಲ್ಲಿ ಅಮೆರಿಕಾದ ಆರ್ಥಿಕತೆ ಬಗ್ಗೆ ಹೇಳಲಾಗಿದ್ದು, ಭಾರತ, ಬ್ರೆಜಿನ್ ಸೇರಿದಂತೆ ನಾಲ್ಕು ಪ್ರಮುಖ ರಾಷ್ಟ್ರಗಳೊಂದಿಗೆ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ ಎಂದು ಹೇಳಿದೆ.

ಭಾರತದಲ್ಲಿ ಕೆಲವು ರಚನಾತ್ಮಕ ಆರ್ಥಿಕ ಸುಧಾರಣೆಗಳಿಂದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ. ಅಧಿಕ ಮುಖಬೆಲೆಯ ನೋಟುಗಳ ಚಲಾವಣೆ ರದ್ದಿನಿಂದ ದೇಶದ ಆರ್ಥಿಕತೆಯಲ್ಲಿ ಶೇಕಡಾ 86ರಷ್ಟು ನೋಟುಗಳ ಚಲಾವಣೆ ಅಮೌಲ್ಯವಾದುದರಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯಿತು. ಭಾರತದ ಆರ್ಥಿಕತೆಯ ಶೇಕಡಾ 90ರಷ್ಟು ನಗದು ಆಧಾರವಾಗಿರುವುದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ.

ಅಲ್ಲದೆ ಕಳೆದ ಜುಲೈಯಲ್ಲಿ ದೇಶಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಸರಕು ಮತ್ತು ಸೇವಾ ತೆರಿಗೆ ಜಾರಿ ಅಲ್ಪಾವಧಿಯ ಅನಿಶ್ಚಿತತೆಯನ್ನು ಉಂಟುಮಾಡಿತು.ಭಾರತದ ಬ್ಯಾಂಕಿಂಗ್ ವಲಯದಲ್ಲಿ ಅನುತ್ಪಾದಕ ಸಾಲಗಳ ಪ್ರಮಾಣ ಹೆಚ್ಚಾಗಿರುವುದರಿಂದ ಆರ್ಥಿಕತೆ ಮೇಲೆ ಮತ್ತಷ್ಟು ಅಪಾಯವನ್ನುಂಟುಮಾಡುತ್ತಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಸರಾಸರಿ ಅನುತ್ಪಾದಕ ಸಾಲಗಳ ಮೌಲ್ಯ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 10.8ರಷ್ಟಿದ್ದು, ಅದು ಸೆಪ್ಟೆಂಬರ್ ವೇಳೆಗೆ ಶೇಕಡಾ 11.1ಕ್ಕೆ ಏರಿಕೆಯಾಗಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಕೋಳಿ ಸಾಕಣೆ ಮೇಲೆ ಭಾರತ ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳನ್ನು ಜಾರಿಗೆ ತರುತ್ತಿಲ್ಲ ಎಂದು ಟ್ರಂಪ್ ಆಡಳಿತ ತಿಳಿಸಿದೆ.

ಅಮೆರಿಕದಿಂದ ಆಮದು ಮಾಡಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಕೋಳಿ ಸಾಕಾಣಿಕೆ ಮೇಲಿನ ಅಗತ್ಯವನ್ನು ಭಾರತ ಪರಿಷ್ಕರಿಸುವಲ್ಲಿ ವಿಫಲವಾಗಿದೆ. ಇದು ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಕೇಸು ಮುಂದುವರಿಯುತ್ತದೆ ಎಂದು ಹೇಳಿದೆ.

ಪ್ರಾಣಿಗಳಿಂದ ಹರಡುವ ಕಾಯಿಲೆಗಳ ಸೋಂಕುಗಳನ್ನು ತಡೆಗಟ್ಟಲು ಅಮೆರಿಕಾದಿಂದ ಕೋಳಿ ಮಾಂಸ, ಹಂದಿ, ಮೊಟ್ಟೆಗಳು ಮತ್ತು ಅಮೆರಿಕಾದ ಕೃಷಿ ಉತ್ಪನ್ನಗಳ ಆಮದಿಗೆ 2007ರಿಂದ ಭಾರತ ನಿಷೇಧ ಹೇರುತ್ತಾ ಬಂದಿದೆ. ಆದರೆ ಯಾವುದೇ ವೈಜ್ಞಾನಿಕ ಮೂಲಗಳು ನಿಷೇಧವನ್ನು ಬೆಂಬಲಿಸುವುದಿಲ್ಲ ಎಂದು ಅಮೆರಿಕಾ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com