ಹೈದರಾಬಾದ್: ಡಲ್ಲಾಸ್ ನಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ಟೆಕ್ಕಿಯೊರ್ವನ ಮೃತದೇಹ ಆತನ ಕೋಣೆಯಲ್ಲಿ ಪತ್ತೆಯಾಗಿದೆ.
ವಿ ಶ್ರೀನಿವಾಸ್ ಚಾರಿ ಎಂಬುವರ ಪುತ್ರ ವಿ ಕೃಷ್ಣ ಚೈತನ್ಯ ಮೃತ ದುರ್ದೈವಿ. ಆತನ ಮೃತದೇಹ ಆತನ ಕೋಣೆಯಲ್ಲಿ ಪತ್ತೆಯಾಗಿದ್ದು ಕೃಷ್ಣ ಚೈತನ್ಯ ಸಾವಿನ ಕುರಿತು ಅನುಮಾನಗಳು ಮೂಡಿವೆ.
ಹೈದರಾಬಾದ್ ನ ಸಿದ್ಧಿಪೇಟೆಯ ಪ್ರಶಾಂತ್ ನಗರದ ನಿವಾಸಿಯಾಗಿದ್ದ ಕೃಷ್ಣ ಚೈತನ್ಯ ಮೂರುವರೆ ವರ್ಷದ ಹಿಂದೆ ಕೆಲಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಕಾಂಗಿಝೇಂಟ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದ ಚೈತನ್ಯ ಪಶ್ಚಿಮ ಡಲ್ಲಾಸ್ ನಲ್ಲಿ ಪಿಜಿಯೊಂದರಲ್ಲಿ ವಾಸವಾಗಿದ್ದರು.
ಜನವರಿ 25ರಿಂದ ಚೈತನ್ಯ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಪಿಜಿ ಮಾಲೀಕ ದೂರು ನೀಡಿದ್ದರು. ಅಂತೆ ಕೋಣೆಯ ಬಾಗಿಲನ್ನು ಒಡೆದು ನೋಡಿದಾಗ ಕೃಷ್ಣ ಚೈತನ್ಯ ಮೃತದೇಹ ಪತ್ತೆಯಾಗಿದೆ. ನಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಚೈತನ್ಯ ಸಾವಿನ ಸುದ್ದಿ ತಿಳಿದ ಪೋಷಕರು ಸಚಿವ ಟಿ ಹರೀಶ್ ರಾವ್ ಅವರಿಗೆ ಮನವಿ ಮಾಡಿ ಪುತ್ರನ ಮೃತದೇಹವನ್ನು ಸ್ವದೇಶಕ್ಕೆ ತರುವಂತೆ ಮನವಿ ಮಾಡಿದ್ದಾರೆ.