ನವದೆಹಲಿ: ಅಮೆರಿಕ-ಚೀನಾ ನಡುವಿನ ಟ್ರೇಡ್ ವಾರ್ ನಿಂದ ಚೀನಾಗೆ ಔಷಧ, ವೈದ್ಯಕೀಯ ಉಪಕರಣಗಳಿಗೆ ಹೊಡೆತ ಬೀಳಲಿದ್ದು, ಅದರಿಂದಾಗುವ ಪರಿಣಾಮದಿಂದ ಪಾರಾಗಲು ಚೀನಾ ಭಾರತವನ್ನು ಹೊಸ ವಾಣಿಜ್ಯ ಪಾಲುದಾರ ರಾಷ್ಟ್ರದ ದೃಷ್ಟಿಯಿಂದ ನೋಡುವಂತಾಗಿದೆ.
ಜೆನೆರಿಕ್ ಔಷಧಗಳು, ಸಾಫ್ಟ್ ವೇರ್, ಶುಗರ್ ಹಾಗೂ ಕೆಲವು ನಿರ್ದಿಷ್ಟ ಮಾದರಿಯ ಅಕ್ಕಿಗಳನ್ನು ಭಾರತದಿಂದ ಪಡೆಯಲು ಚೀನಾ ಎದುರು ನೋಡುತ್ತಿದ್ದು, ಭಾರತದಲ್ಲಿ ಉತ್ಪಾದನೆಯಾಗುವ ಔಷಧಗಳಿಗೆ ಚೀನಾ ತ್ವರಿತಗತಿಯಲ್ಲಿ ಅನುಮೋದನೆ ನೀಡುತ್ತಿದೆ ಎಂದು ಇಂಡಿಯನ್ ಎಕ್ಸ್ಪೋರ್ಟ್ ಪ್ರೊಮೋಷನ್ ಗ್ರೂಪ್ ಹೇಳಿದೆ.
ಭಾರತದಿಂದ ಔಷಧೀಯ ಮಾರಾಟಕ್ಕೆ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಲಿದೆ ಎಂದು ಉಭಯ ರಾಷ್ಟ್ರಗಳ ಅಧಿಕಾರಿಗಳೂ ಅಭಿಪ್ರಾಯಪಟ್ಟಿದ್ದಾರೆ. 2017/18 ರಲ್ಲಿ ಅಮೆರಿಕ, ಯುರೋಪ್ ಒಕ್ಕೂಟವೂ ಸೇರಿದಂತೆ ಒಟ್ಟು 17.3ಬಿಲಿಯನ್ ಡಾಲರ್ ಮೌಲ್ಯದ ಔಷಧಗಳನ್ನು ಮಾರಾಟ ಮಾಡುವುದರ ಮೂಲಕ ವಿಶ್ವದ ಜೆನೆರಿಕ್ ಮಾರುಕಟ್ಟೆಯನ್ನು ಭಾರತವೇ ವ್ಯಾಪಿಸಿದೆ. ಆದರೆ ಔಷದ ಮಾರುಕಟ್ಟೆ ಹಾಗೂ ಇಂಡಸ್ಟ್ರಿಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಚೀನಾ ಕೇವಲ ಶೇ.1 ರಷ್ಟನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ ಎಂದು ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.
ಇಯು ಅನುಮೋದಿತ ಭಾರತದ ಪೂರೈಕೆದಾರರಿಗೆ ಔಷಧ ಪರವಾನಗಿಯನ್ನು ನೀಡಬೇಕು ಈ ಮೂಲಕ ಅವರು 6 ತಿಂಗಳಲ್ಲಿ ಚೀನಾ ಮಾರುಕಟ್ಟೆಯನ್ನು ಪ್ರವೇಶಿಸುವಂತಾಗಬೇಕು ಎಂದು ಚೀನಾ ಅಧಿಕಾರಿಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂಬುದು ತಿಳಿದುಬಂದಿದೆ. ಭಾರತ ಈಗಾಗಲೇ ಯುರೋಪಿಯನ್ ಒಕ್ಕೂಟಕ್ಕೆ ಔಷಧಗಳನ್ನು ಮಾರಾಟ ಮಾಡುತ್ತಿದ್ದು, ಈಗ ಚೀನಾ ಸಹ ಅನುಮೋದನೆ ನೀಡಿದರೆ ಭಾರತೀಯ ಔಷಧ ಸಂಸ್ಥೆಗಳಿಗೆ ಆದಾಯ ಹೆಚ್ಚಾಗುತ್ತದೆ. ಈ ಮೂಲಕ ಅಮೆರಿಕದ ಅವಲಂಬನೆಯನ್ನು ಕಡಿಮೆ ಮಾಡಬಹುದಾಗಿದ್ದು ಟ್ರೇಡ್ ವಾರ್ ನಲ್ಲಿ ಅಮೆರಿಕಾಗೆ ತಕ್ಕ ಉತ್ತರ ನೀಡಿದಂತಾಗುತ್ತದೆ ಎಂಬುದು ಚೀನಾದ ಆಲೋಚನೆಯಾಗಿದೆ.