ಕೊನೆಗೂ ಕೊಟ್ಟ ಮಾತು ಉಳಿಸಿಕೊಂಡ ಸರ್ವಾಧಿಕಾರಿ ಕಿಮ್, ಉ.ಕೊರಿಯಾ ನಡೆಗೆ ಅಮೆರಿಕ ಶ್ಲಾಘನೆ

ಸಿಂಗಾಪುರ ಶೃಂಗಸಭೆಯಲ್ಲಿ ಅಮೆರಿಕಕ್ಕೆ ಕೊಟ್ಟ ಮಾತಿನಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ನಡೆದುಕೊಂಡಿದ್ದು, ಕೊರಿಯಾ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಅಮೆರಿಕದ ಸೈನಿಕರ ಮೃತದೇಹಗಳನ್ನು ಅಮೆರಿಕಕ್ಕೆ ರವಾನೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ಯೋಗ್ಯಾಂಗ್: ಸಿಂಗಾಪುರ ಶೃಂಗಸಭೆಯಲ್ಲಿ ಅಮೆರಿಕಕ್ಕೆ ಕೊಟ್ಟ ಮಾತಿನಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ನಡೆದುಕೊಂಡಿದ್ದು, ಕೊರಿಯಾ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಅಮೆರಿಕದ ಸೈನಿಕರ ಮೃತದೇಹಗಳನ್ನು ಅಮೆರಿಕಕ್ಕೆ ರವಾನೆ ಮಾಡಿದ್ದಾರೆ.
ಅಮೆರಿಕ ಸೈನಿಕರ ಮೃತ ದೇಹಗಳನ್ನು ಹೊತ್ತ ಅಮೆರಿಕ ವಾಯು ಸೇನೆ ಸಿ-17 ಯುದ್ಧ ವಿಮಾನ ಉತ್ತರ ಕೊರಿಯಾದ ವೋನ್ಸನ್ ನಿಂದ ಅಮೆರಿಕಕ್ಕೆ ಹಾರಿದೆ. ಅಮೆರಿಕ ಸೈನಿಕರ ಮೃತದೇಹಗಳನ್ನು ಉತ್ತರ ಕೊರಿಯಾದ ಸೇನಾಧಿಕಾರಿಗಳು ಬೀಳ್ಕೊಟ್ಟಿದ್ದು ವಿಶೇಷವಾಗಿತ್ತು. ಕೊರಿಯಾದಲ್ಲಿರುವ ಅಮೆರಿಕ ಸೇನಾಧಿಕಾರಿಗಳು ಹುತಾತ್ಮ ಯೋಧರ ಮೃತದೇಹಗಳನ್ನು ಸ್ವೀಕರಿಸಿದರು ಎಂದು ವೈಟ್ ಹೌಸ್ ತಿಳಿಸಿದೆ.
ಇನ್ನು ಉತ್ತರ ಕೊರಿಯಾದ ನಡೆಯನ್ನು ಕಂಠಪೂರ್ತಿ ಶ್ಲಾಘಿಸಿರುವ ಅಮೆರಿಕ ಕಿಮ್ ಜಾಂಗ್ ಉನ್ ನಡೆ ಹೊಸ ಸೌಹಾರ್ಧತೆಯತ್ತ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದೆ. ಉತ್ತರ ಕೊರಿಯಾದ ನಿರ್ಧಾರ ನಿಜಕ್ಕೂ ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಸಿಂಗಾಪುರ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿದ್ದ ಮಾತಿನಂತೆ ಕಿಮ್ ಜಾಂಗ್ ಉನ್ ನಡೆದುಕೊಂಡಿದ್ದಾರೆ ಎಂದು ಹೇಳಿದೆ.
ಇನ್ನು ಕೊರಿಯಾ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಸುಮಾರು 35 ಸಾವಿರ ಯೋಧರು ಸಾವನ್ನಪ್ಪಿದ್ದರು. ಈ ಪೈಕಿ ಇನ್ನು 7, 700 ಮಂದಿ ಯೋಧರು ನಾಪತ್ತೆಯಾಗಿದ್ದು, ಈ ವರೆಗೂ ಅವರು ಸತ್ತಿರುವ ಅಥವಾ ಬದುಕಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಉತ್ತರ ಕೊರಿಯಾ ಒಂದರಲ್ಲೇ ಸುಮಾರು 5.300 ಯೋಧರು ನಾಪತ್ತೆಯಾಗಿದ್ದಾರೆ. 1990, 2005 ರಲ್ಲಿ ಉತ್ತರ ಕೊರಿಯಾ ಅಮೆರಿಕದ ಹುತಾತ್ಮ ಯೋಧರ ಮೃತದೇಹಗಳನ್ನು ಅಮೆರಿಕಕ್ಕೆ ರವಾನೆ ಮಾಡಿತ್ತು. ಹೀಗೆ ಸುಮಾರು 229 ಬಾರಿ ಉತ್ತರ ಕೊರಿಯಾ ಹುತಾತ್ನ ಯೋಧರ ದೇಹಗಳನ್ನು ರವಾನೆ ಮಾಡಿದೆ. ಆದರೆ 2005ರ ಬಳಿಕ ಉತ್ತರ ಕೊರಿಯಾ ಸರ್ಕಾರ ಇದನ್ನು ನಿಲ್ಲಿಸಿತ್ತು.
ಇನ್ನು ಅತ್ತ ಅಮೆರಿಕದಲ್ಲಿ ಹುತಾತ್ಮಯೋಧರ ದೇಹಗಳನ್ನು ವಾಪಸ್ ತೆಗೆದುಕೊಂಡು ಬರುವಂತೆ ಯೋಧರ ಸಂಬಂಧಿಗಳು ಒತ್ತಾಯಿಸುತ್ತಿದ್ದರು. 
ಕಳೆದ ಜೂನ್ 18ರಂದು ಸಿಂಗಾಪುರ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಣ್ವಸ್ತ್ರ ನಿಶ್ಯಸ್ತ್ರೀಕರಣವೂ ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದರು. ಈ ಪೈಕಿ ಹುತಾತ್ಮ ಯೋಧರ ಹಸ್ತಾಂತರವೂ ಒಪ್ಪಂದದಲ್ಲಿ ಸೇರಿತ್ತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com