ಕಿರುಕುಳ ಪ್ರಕರಣ: ಭಾರತದಲ್ಲಿನ ತನ್ನ ರಾಯಭಾರಿ ಸೋಹೇಲ್ ಮಹಮೂದ್ ಗೆ ಪಾಕ್ ಬುಲಾವ್

ದೆಹಲಿಯಲ್ಲಿ ತನ್ನ ರಾಯಭಾರಿ ಸಿಬ್ಬಂದಿಗಳ ಮೇಲೆ ನಿರಂತರ ಕಿರುಕುಳ ಮತ್ತು ಬೆದರಿಕೆಯೊಡ್ಡಲಾಗುತ್ತಿದ್ದು ಈ ಕುರಿತು ಸಮಾಲೋಚನೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ದೆಹಲಿಯಲ್ಲಿ ತನ್ನ ರಾಯಭಾರಿ ಸಿಬ್ಬಂದಿಗಳ ಮೇಲೆ ನಿರಂತರ ಕಿರುಕುಳ ಮತ್ತು ಬೆದರಿಕೆಯೊಡ್ಡಲಾಗುತ್ತಿದ್ದು ಈ ಕುರಿತು ಸಮಾಲೋಚನೆ ನಡೆಸಲು ಭಾರತದಲ್ಲಿರುವ ಹೈ ಕಮಿಷನರ್ ಸೋಹೇಲ್ ಮಹಮೂದ್  ಅವರನ್ನು ಹಿಂದಕ್ಕೆ ಕರೆಸಲು ನಿರ್ಧರಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಕಚೇರಿ ವಕ್ತಾರ ಮಹಮೂದ್ ಫೈಸಲ್, ಪಾಕಿಸ್ತಾನ ರಾಯಭಾರಿ ಕಚೇರಿಯ ಸಿಬ್ಬಂದಿ ಮತ್ತು ಅವರ ಕುಟುಂಬದವರ  ಮೇಲೆ ಕಿರುಕುಳ ನಡೆಯುತ್ತಿದ್ದರೂ ಈ ಬಗ್ಗೆ ವಿಚಾರಿಸಿ ಕೈಗೊಳ್ಳುವಲ್ಲಿ ಭಾರತ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸಮಾಲೋಚನೆ ನಡೆಸಲು ದೆಹಲಿಯಲ್ಲಿರುವ ಹೈ ಕಮಿಷನರ್ ನ್ನು ಇಸ್ಲಾಮಾಬಾದಿಗೆ ಬರುವಂತೆ ಹೇಳಲಾಗಿದೆ ಎಂದರು.

ದೆಹಲಿಯಲ್ಲಿರುವ ಹೈ ಕಮಿಷನರ್ ಕಚೇರಿಯಲ್ಲಿ ಪಾಕಿಸ್ತಾನದ ಸಿಬ್ಬಂದಿ ಮತ್ತು ಅವರ ಕುಟುಂಬದವರ ಮೇಲೆ ಮತ್ತು ಚಿಕ್ಕ ಮಕ್ಕಳ ಮೇಲೆ ಸಹ ನಿರಂತರ ಕಿರುಕುಳ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆಯಲು ಕಳೆದ ಮಂಗಳವಾರ ವಿದೇಶಾಂಗ ಕಚೇರಿ ಭಾರತದ ಉಪ ಹೈಕಮಿಷನರ್ ಜೆ.ಪಿ.ಸಿಂಗ್ ಅವರನ್ನು ಕರೆಸಿಕೊಂಡಿತ್ತು.

ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿ ಸಿಬ್ಬಂದಿ ಮತ್ತು ಅವರ ಕುಟುಂಬದವರು ನಿರಂತರ ಕಿರುಕುಳ, ಬೆದರಿಕೆ ಮತ್ತು ತೀವ್ರವಾದ ಹಿಂಸೆ  ಎದುರಿಸುತ್ತಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಪ್ರತಿಪಾದಿಸಿತ್ತು.

ಭಾರತ ಹೈ ಕಮಿಷನ್ ವಿರುದ್ಧ ಪ್ರತಿಭಟನೆ ನಡೆಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಪದೇ ಪದೇ ಪಾಕಿಸ್ತಾನದ ಸಿಬ್ಬಂದಿಗಳ ಮೇಲೆ ಕಿರುಕುಳ ನಡೆಯುತ್ತಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೂಡ ಇದೇ ರೀತಿಯ ಪರಿಸ್ಥಿತಿಯಿದೆ. ಈ ಬಗ್ಗೆ ಭಾರತ ವಿದೇಶಾಂಗ ಕಚೇರಿಗೆ ದೂರು ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಫೈಸಲ್ ಆರೋಪಿಸಿದ್ದಾರೆ.

ಇಂತಹ ಕಿರುಕುಳ ಪ್ರಕರಣಗಳಿಗೆ ಮುಕ್ತಿ ಹಾಡಲು ಭಾರತ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ವಿದೇಶಾಂಗ ರಾಯಭಾರವನ್ನು ರಕ್ಷಿಸುವಲ್ಲಿ ಭಾರತ ಸರ್ಕಾರದ ವೈಫಲ್ಯ ಅಥವಾ ನಿರಾಸಕ್ತಿಯನ್ನು ತೋರಿಸುತ್ತದೆ ಎಂದು ಕೂಡ ಫೈಸಲ್ ಆರೋಪಿಸಿದ್ದಾರೆ.
ವಿಯೆನ್ನಾ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಪಾಕಿಸ್ತಾನ ರಾಯಭಾರಿ ಕಚೇರಿಯ ಸಿಬ್ಬಂದಿ ಮತ್ತು ಅವರ ಕುಟುಂಬದವರ ಸುರಕ್ಷತೆ ಮತ್ತು ರಕ್ಷಣೆ  ಭಾರತ ಸರ್ಕಾರದ ಕರ್ತವ್ಯವಾಗಿದೆ.

ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ, ಪಾಕಿಸ್ತಾನದ ಉಪ ಹೈ ಕಮಿಷನರ್ ಕಾರನ್ನು ಭಾರತದ ಅಧಿಕಾರಿಗಳು ಸುಮಾರು 40 ನಿಮಿಷಗಳ ಕಾಲ ತಡೆದು ನಿಲ್ಲಿಸಿ ಅವರಿಗೆ ಕಿರುಕುಳ ನೀಡಿದ್ದಾರೆ. ಪಾಕಿಸ್ತಾನದಲ್ಲಿರುವ ಭಾರತೀಯ ಹೈ ಕಮಿಷನರ್ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಅತಿ ಹೆಚ್ಚಿನ ಸುರಕ್ಷತೆ ಮತ್ತು ರಕ್ಷಣೆ ನೀಡುವಲ್ಲಿ ಪಾಕಿಸ್ತಾನ ಎಂದಿಗೂ ಬದ್ಧವಾಗಿದೆ ಎಂದು ಹೇಳಿದರು.

ಭಾರತದ ಚುನಾವಣಾ ರಾಜಕೀಯದಲ್ಲಿ ಪಾಕಿಸ್ತಾನವನ್ನು ಎಳೆದು ತರುವುದು ಬೇಡ. ಪಾಕಿಸ್ತಾನ ಶಾಂತಿ, ಸೌಹಾರ್ದತೆಯನ್ನು ಬಯಸುತ್ತಿದ್ದು ಯಾವುದೇ ಯುದ್ಧ, ಶಸ್ತ್ರಾಸ್ತ್ರಗಳ ಪ್ರಯೋಗಕ್ಕೆ ವಿರುದ್ಧವಾಗಿದೆ ಎಂದು ಮುಹಮ್ಮದ್ ಫೈಸಲ್ ಹೇಳಿದ್ದಾರೆ.

ಆದರೆ ಭಾರತ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿದೆ. ಭಾರತದಲ್ಲಿರುವ ತನ್ನ ಹೈ ಕಮಿಷನರನ್ನು ಕರೆದಿರುವುದು ವಾಡಿಕೆಯ ಕ್ರಮವಾಗಿದೆ. ಸಮಾಲೋಚನೆ ನಡೆಸಲು ರಾಯಭಾರಿಯನ್ನು ವಾಪಸ್ ಕರೆಯಲಾಗಿದೆ. ತನ್ನ ವಿದೇಶಾಂಗ ಕಚೇರಿಯ ಆಗುಹೋಗುಗಳನ್ನು ವಿವರಿಸುವುದು ಹೈ ಕಮಿಷನರ್ ಅವರ ಸಾಮಾನ್ಯ ಪ್ರಕ್ರಿಯೆಯಾಗಿರುತ್ತದೆ. ಈ ವಿಷಯದಲ್ಲಿ ಇನ್ನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಈ ಬಗ್ಗೆ ಇಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com