ಲಾಹೋರ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು ಇದೇ ಮೊದಲ ಬಾರಿಗೆ ಮುಂಬೈ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಅವುಗಳನ್ನು ಸರ್ಕಾರೇತರ ಶಕ್ತಿಗಳೆಂದು ಕರೆಯಬಹುದು. ಮುಂಬೈಯಲ್ಲಿ 150ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲು ಈ ಸಂಘಟನೆಗಳಿಗೆ ನಾವು ಅವಕಾಶ ಕೊಡಬೇಕೆ? ಎಂದು ಪಾಕ್ ಮಾಜಿ ಪ್ರಧಾನಿ ಪ್ರಶ್ನಿಸಿರುವುದಾಗಿ ಡಾನ್ ವರದಿ ಮಾಡಿದೆ.
ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಮತ್ತು ಉಗ್ರ ಮಸೂದ್ ಅಜರ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ, ಭಯೋತ್ಪಾದನೆಗೆ ನಾವು ಸಹ ಬಲಿಪಶುಗಳಾಗುತ್ತಿದ್ದೇವೆ. ಇದಕ್ಕೆಲ್ಲ ಸರ್ಕಾರೇತರ ಶಕ್ತಿಗಳೇ ಹೊಣೆ ಎಂದು ಷರೀಫ್ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಸರ್ಕಾರೇತರ ಶಕ್ತಿಗಳನ್ನು ಗಡಿ ದಾಟಿ ಹೋಗಿ 150 ಜನರನ್ನು ಹತ್ಯೆ ಮಾಡಲು ನಾವು ಅವಕಾಶ ನೀಡಬೇಕೆ? ನನಗೆ ವಿವರಿಸಿ. ಮುಂಬೈ ದಾಳಿಯ ವಿಚಾರಣೆಯನ್ನು ಏಕೆ ಪೂರ್ಣಗೊಳಿಸಬಾರದು? ಎಂದು ಷರೀಫ್ ಪ್ರಶ್ನಿಸಿದ್ದಾರೆ.
ಮುಂಬೈ ದಾಳಿಯ ವಿಚಾರಣೆಯನ್ನು ರಾವಲ್ಪಿಂಡಿ ಉಗ್ರ ನಿಗ್ರಹ ಕೋರ್ಟ್ ನಲ್ಲಿ ತಡೆ ಹಿಡಿಯಲಾಗಿದೆ.
ಪನಾಮಾ ಪೇಪರ್ಸ್ ಹಗರಣದಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನವಾಜ್ ಷರೀಫ್ ಅವರನ್ನು ಅನರ್ಹಗೊಳಿಸಿದ ಬಳಿಕ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು.