ವಾಷಿಂಗ್ಟನ್ : ಅಫ್ಘಾನಿಸ್ತಾನದೊಂದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ನಿರ್ಮಾಣದ ಜೊತೆಗೆ, ಇರಾನ್ ನ ಆಯಕಟ್ಟಿನ ಪ್ರದೇಶದಲ್ಲಿ ನೆಲೆಗೊಂಡಿರುವ ಚಬಹರ್ ಬಂದರಿನ ಅಭಿವೃದ್ಧಿಗಾಗಿ ಕೆಲವು ನಿರ್ಬಂಧಗಳಿಂದ ಭಾರತಕ್ಕೆ ಅಮೆರಿಕಾ ವಿನಾಯಿತಿ ನೀಡಿದೆ.
ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತಕ್ಕೆ ವಿನಾಯಿತಿ ನೀಡಿದ ನಂತರ ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ , ಚಬಹರ್ ಬಂದರು ಅಭಿವೃದ್ದಿಯಲ್ಲಿ ಭಾರತದ ಪಾತ್ರವನ್ನು ಮನಗಂಡು ಇದೀಗ ಈ ನಿರ್ಧಾರ ಕೈಗೊಂಡಿದೆ.
ಅಪ್ಘಾನಿಸ್ತಾನದೊಂದಿಗೆ ರೈಲ್ವೆ ನಿರ್ಮಾಣದ ಜೊತೆಗೆ ತೈಲ ಆಮದು ಆಗುವ ಚಬಹರ್ ಅಭಿವೃದ್ದಿಗೆ ಗೌರವ ನೀಡುವ ನಿಟ್ಟಿನಲ್ಲಿ 2012 ರ ಕೌಂಟರ್ ಪ್ರಸರಣ ಕಾಯ್ದೆಯಡಿ ಇರಾನ್ ಮೇಲೆ ಹೇರಲಾಗಿದ್ದ ಕೆಲ ನಿರ್ಬಂಧಗಳಿಗೆ ಅಮೆರಿಕಾ ರಾಜ್ಯ ಕಾರ್ಯದರ್ಶಿ ವಿನಾಯಿತಿ ನೀಡಿದ್ದಾರೆ ಎಂದು ರಾಜ್ಯ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಇರಾನ್ ವರ್ತನೆ ನಿಯಂತ್ರಿಸುವ ನಿಟ್ಟಿನಲ್ಲಿ ಅಮೆರಿಕಾ ವಿಧಿಸಿರುವ ನಿರ್ಬಂಧ ಸೋಮವಾರದಿಂದ ಜಾರಿಗೆ ಬಂದಿದ್ದು, ಯುರೋಪ್, ಏಷ್ಯಾ ಸೇರಿದಂತೆ ಯಾವುದೇ ರಾಷ್ಟ್ರಗಳು ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ.
ಆದಾಗ್ಯೂ, ಭಾರತ, ಚೀನಾ, ಇಟಲಿ, ಗ್ರೀಸ್, ಜಪಾನ್, ದಕ್ಷಿಣ ಕೊರಿಯಾ, ತೈವಾನ್, ಮತ್ತು ಟರ್ಕಿ ದೇಶಗಳು ತಾತ್ಕಾಲಿಕವಾಗಿ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಬಹುದೆಂದು ಅಮೆರಿಕಾ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದರು.
ಮೇ 2016ರಲ್ಲಿ ಇರಾನ್ ನಿಂದ ಸಾಗರೋತ್ತರ ಮೂಲಕ ಸರಕು ಮತ್ತು ಸೇವೆಗಳ ಸಾಗಣೆಗಾಗಿ ಭಾರತ, ಇರಾನ್ ಮತ್ತು ಅಪ್ಘಾನಿಸ್ತಾನ ಚಹಬರ್ ಬಂದರು ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದ್ದವು.
Advertisement