ಕಾರ್ಯವಾಸಿ ಕತ್ತೆ ಕಾಲು..!; ಆರ್ಥಿಕ ಸಂಕಷ್ಟದಿಂದ ಪಾರಾಗಲು 'ಕತ್ತೆ' ಮೊರೆ ಹೋದ ಪಾಕಿಸ್ತಾನ!

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ತನ್ನ ಸಂಕಷ್ಟದಿಂದ ಪಾರಾಗಲು ಕತ್ತೆಗಳ ಮೊರೆ ಹೋಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ತನ್ನ ಸಂಕಷ್ಟದಿಂದ ಪಾರಾಗಲು ಕತ್ತೆಗಳ ಮೊರೆ ಹೋಗಿದೆ...
ಹೌದು... ಈ ಬಗ್ಗೆ ಗಲ್ಫ್ ನ್ಯೂಸ್ ಸುದ್ದಿ ಮಾಡಿದ್ದು, ಕಾರ್ಯವಾಸಿ ಕತ್ತೆ ಕಾಲು ಎಂಬ ಗಾದೆ ಪಾಕಿಸ್ತಾನದಲ್ಲಿ ಅಕ್ಷರಶಃ ನಿಜವಾಗಿದ್ದು, ತೀವ್ರ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಪಾಕಿಸ್ತಾನ ಸರ್ಕಾರ ಸಂಕಷ್ಟದಿಂದ ಪಾರಾಗಲು ತನ್ನ ದೇಶದ ಕತ್ತೆಗಳನ್ನು ವಿದೇಶಗಳಿಗೆ ರಫ್ತು ಮಾಡಲು ಮುಂದಾಗಿದೆ. ಇದಕ್ಕಾಗಿ ಪಾಕಿಸ್ತಾನ ಸರ್ಕಾರ ತನ್ನ ದೇಶದಲ್ಲಿ ಕತ್ತೆಗಳ ಫಾರಂ ಮತ್ತು ಕತ್ತೆಗಳಿಗಾಗಿಯೇ ವಿಶೇಷ ಆಸ್ಪತ್ರೆ ನಿರ್ಮಾಣಕ್ಕೂ ಮುಂದಾಗಿದೆ.
ಪಾಕಿಸ್ತಾನದ ಈ ವಿನೂತನ ಯೋಜನೆಗೆ ಕೈ ಜೋಡಿಸಿರುವುದು ಅದರ ಆಪ್ತ ರಾಷ್ಟ್ರ ಚೀನಾ.. ಚೀನಾ ಮತ್ತು ಪಾಕಿಸ್ತಾನ ದೇಶಗಳ ನಡುವೆ ಈ ಕುರಿತು ಮಹತ್ವದ ಒಪ್ಪಂದ ವೇರ್ಪಟ್ಟಿದ್ದು, ಪಾಕಿಸ್ತಾನದಿಂದ ಚೀನಾ ದೇಶ ಕತ್ತೆಗಳನ್ನು ಖರೀದಿ ಮಾಡಲಿದೆ. ಇದಕ್ಕಾಗಿ ಪಾಕಿಸ್ತಾನದೊಂದಿಗೆ ಚೀನಾ ಒಪ್ಪಂದ ಮಾಡಿಕೊಂಡಿದ್ದು, ಚೀನಾ ಮೂಲದ ಕೆಲ ಖಾಸಗಿ ಕಂಪನಿಗಳೂ ಕೂಡ ಪಾಕಿಸ್ತಾನದಲ್ಲಿ ನಿರ್ಮಾಣವಾಗಲಿರುವ ಕತ್ತೆಗಳ ಫಾರ್ಮ್ ಗಳ ಮೇಲೆ ಸುಮಾರು 3 ಬಿಲಿಯನ್ ಡಾಲರ್ ಮೊತ್ತದಷ್ಟು ಬಂಡವಾಳ ಕೂಡ ಹೂಡಲಿದೆ.
ಇನ್ನು ಈ ಒಪ್ಪಂದದ ನಿಮಿತ್ತ ಪಾಕಿಸ್ತಾನ ಮೂರು ವರ್ಷಗಳಲ್ಲಿ ಚೀನಾಗೆ ಸುಮಾರು 80 ಸಾವಿರ ಕತ್ತೆಗಳನ್ನು ರಫ್ತು ಮಾಡಬೇಕಿದೆ. ಇದಕ್ಕಾಗಿ ಪಾಕ್ ಸರ್ಕಾರ ಖೈಬರ್ ಫಕ್ತುಂಕ್ವಾ ಪ್ರಾಂತ್ಯದಲ್ಲಿ ವಿಸ್ತಾರವಾದ ಕತ್ತೆಗಳ ಫಾರ್ಮ್ ನಿರ್ಮಾಣ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಘೋಷಣೆ ಮಾಡಿದ್ದು, ಅಲ್ಲದೆ ಕತ್ತೆಗಳ ಆರೋಗ್ಯ ನಿರ್ವಹಣೆಗಾಗಿ ಇಲ್ಲಿಯೇ ದೊಡ್ಡ ಪಶು ಆಸ್ಪತ್ರೆ ಕೂಡ ನಿರ್ಮಾಣ ಮಾಡುವುದಾಗಿ ಹೇಳಿದೆ. ಇನ್ನು ಅಚ್ಚರಿ ಅಂಶವೆಂದರೆ ಇಡೀ ವಿಶ್ವದಲ್ಲೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಕತ್ತೆಗಳು ಬೆಳೆಯುವ ದೇಶ ಎಂದರೆ ಚೀನಾ ಆಗಿದ್ದು, ಈ ಪಟ್ಟಿಯಲ್ಲಿ ಚೀನಾ ಅಗ್ರ ಸ್ಥಾನದಲ್ಲಿದೆ. ಇನ್ನು ಪಟ್ಟಿಯಲ್ಲಿ ಪಾಕಿಸ್ತಾನ 3ನೇ ಸ್ಥಾನದಲ್ಲಿದೆ. ಹೀಗಿದ್ದರೂ ಪಾಕಿಸ್ತಾನದಿಂದೇಕೆ ಚೀನಾ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂಬುದು ಅಚ್ಚರಿ ವಿಷಯ.
ಇನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ನೆರವು ಕೋರಿದ್ದು, 8 ಬಿಲಿಯನ್ ಸಾಲ ನೀಡುವಂತೆ ಮನವಿ ಮಾಡಿತ್ತು. ಅಂತೆಯೇ ಆರ್ಥಿಕ ಸಂಕಷ್ಟದಿಂದ ಪಾಕಿಸ್ತಾನ ಪಾರಾಗಲೂ ನೆರವು ನೀಡಲು ಮುಂದಾಗಿರುವ ಸೌದೆ ದೊರೆ ಶೇಖ್ ಮಹಮದ್ ಬಿನ್ ಜಾಯೆದ್ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಿ 6.2 ಬಿಲಿಯನ್ ಡಾಲರ್ ನೆರವು ಘೋಷಣೆ ಮಾಡಿದ್ದರು. ಇದೀಗ ಚೀನಾ ಕೂಡ ಹೊಸ ಮಾರ್ಗದಲ್ಲಿ ಪಾಕ್ ಗೆ ನೆರವು ನೀಡಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com